ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಂದು ರಸ್ತೆಗೆ ಎಸೆದು ಪರಾರಿ

| N/A | Published : Apr 08 2025, 01:47 AM IST / Updated: Apr 08 2025, 04:56 AM IST

ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಂದು ರಸ್ತೆಗೆ ಎಸೆದು ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದು ರಸ್ತೆಗೆ ಎಸೆದಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದು ರಸ್ತೆಗೆ ಎಸೆದಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ಮೈಸೂರು ರಸ್ತೆ ಅಂಚೆಪಾಳ್ಯ ನಿವಾಸಿ ಸಮೀರ್‌(26) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಬನಶಂಕರಿ 6ನೇ ಹಂತದ 7ನೇ ಬ್ಲಾಕ್‌ ತುರಹಳ್ಳಿ ಫಾರೆಸ್ಟ್ ಪಕ್ಕದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಮೀರ್‌ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿರುವ ಕೆಂಗೇರಿ ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಕೊಲೆಯಾದ ಸಮೀರ್‌ ವಿವಾಹಿತನಾಗಿದ್ದು, ಕುಟುಂಬದ ಜತೆಗೆ ಅಂಚೆಪಾಳ್ಯದಲ್ಲಿ ನೆಲೆಸಿದ್ದ. ಕಲಾಸಿಪಾಳ್ಯ ಸಮೀಪದ ಬಸವಪ್ಪ ಸರ್ಕಲ್‌ನ ಆಲ್‌ ಇಂಡಿಯಾ ಟೈಯರ್ಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ಎಂದಿನಂತೆ ಟೈಯರ್‌ಗೆ ಅಂಗಡಿಗೆ ಕೆಲಸಕ್ಕೆ ತೆರಳಿದ್ದ ಸಮೀರ್‌, ಸಂಜೆ 5ರಿಂದ ನಾಪತ್ತೆಯಾಗಿದ್ದ. ಸೋಮವಾರ ಬೆಳಗ್ಗೆ ಸಮೀರ್‌ನ ಮೃತದೇಹ ಪತ್ತೆಯಾಗಿದೆ.

ಗಸ್ತು ಪೊಲೀಸರು ನೋಡಿದಾಗ ಬೆಳಕಿಗೆ:

ಸೋಮವಾರ ಬೆಳಗ್ಗೆ ಸುಮಾರು 9.15ಕ್ಕೆ ಕೆಂಗೇರಿ ಠಾಣೆಯ ಎಎಸ್‌ಐ ಎಚ್.ಎಂ.ಕೃಷ್ಣಪ್ಪ ಅವರು ಹೋಯ್ಸಳ ಗಸ್ತು ಕರ್ತವ್ಯದಲ್ಲಿದ್ದರು. ಬನಶಂಕರಿ 6ನೇ ಹಂತದ ತುರಹಳ್ಳಿ ಫಾರಸ್ಟ್‌ ಪಕ್ಕದ ರಸ್ತೆಯಲ್ಲಿ ಹೋಗುವಾಗ ಅಪರಿಚಿತ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಹತ್ತಿರ ತೆರಳಿ ಪರಿಶೀಲಿಸಿದಾಗ ಮೃತದೇಹದ ಮೇಲೆ ಮಾರಕಾಸ್ತ್ರಗಳಿಂದ ಹೊಡೆದಿರುವ ಗುರುತುಗಳು ಪತ್ತೆಯಾಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸೀನ್‌ ಆಫ್‌ ಕ್ರೈಂ ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಬಂದಿದ್ದು, ಕೆಲವು ಮಾದರಿಗಳನ್ನು ಸಂಗ್ರಹಿಸಿದೆ. ಬಳಿಕ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಪರಿಚಿತರಿಂದಲೇ ಕೃತ್ಯ ಶಂಕೆ:

ಕೊಲೆಯಾದ ವ್ಯಕ್ತಿ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರು ತನಿಖೆ ನಡೆಸಿ ಕೊಲೆಯಾದ ವ್ಯಕ್ತಿ ಸಮೀರ್‌ ಎಂದು ಗುರುತಿಸಿದ್ದಾರೆ. ಸಮೀರ್‌ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪರಿಚಿತರೇ ವೈಯಕ್ತಿಕ ಅಥವಾ ಹಣಕಾಸು ವಿಚಾರಕ್ಕೆ ಸಮೀರ್‌ನನ್ನು ಕೊಲೆಗೈದು ಬಳಿಕ ಬಳಿಕ ಮೃತದೇಹವನ್ನು ಫಾರಸ್ಟ್‌ ಪಕ್ಕದ ರಸ್ತೆಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಕೆಂಗೇರಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ಆರಂಭಿಸಿರುವ ಪೊಲೀಸರು, ಕೆಲವು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.