ಸಾರಾಂಶ
ಬೆಂಗಳೂರು : ಸಾಲ ಮರಳಿಸದ ಕಾರಣಕ್ಕೆ ಕ್ಯಾಬ್ ಚಾಲಕನೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನ ನಿಲುಗಡೆ ಆವರಣದಲ್ಲಿ ನಡೆದಿದೆ.
ವಿನಾಯಕ ನಗರದ ನಿವಾಸಿ ಲೋಕೇಶ್ (37) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ಜೆ.ಪಿ.ನಗರ ಸಾರಕ್ಕಿ ಸಮೀಪದ ನಿವಾಸಿ ಮುತ್ತುರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಐಎ ವಾಹನ ನಿಲುಗಡೆ ಪ್ರದೇಶದಲ್ಲಿ ಮಂಗಳವಾರ ರಾತ್ರಿ 1.30ರ ಸುಮಾರಿಗೆ ಕ್ಯಾಬ್‌ನಲ್ಲಿ ಕುಳಿತು ಸ್ನೇಹಿತರು ಮಾತನಾಡುತ್ತಿದ್ದರು. ಆಗ ಹಣಕಾಸು ವಿಚಾರವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಹಣ್ಣು ಕತ್ತರಿಸಲು ಕ್ಯಾಬ್‌ನಲ್ಲಿಟ್ಟಿದ ಚಾಕುವಿನಿಂದ ಲೋಕೇಶ್ ಎದೆಗೆ ಮುತ್ತುರಾಜ್ ಚುಚ್ಚಿದ್ದಾನೆ. ತಕ್ಷಣವೇ ಗಾಯಾಳು ರಕ್ಷಣೆಗೆ ಸಹ ಕ್ಯಾಬ್ ಚಾಲಕರು ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ವಿ.ಜೆ.ಡಿಸಿಪಿ ಸಜೀತ್ ತಿಳಿಸಿದ್ದಾರೆ.
₹6 ಲಕ್ಷ ಸಾಲದ ಗಲಾಟೆ:
ಮೃತ ಲೋಕೇಶ್ ಹಾಗೂ ಮುತ್ತುರಾಜ್ ಮೂಲತಃ ಆಂಧ್ರಪ್ರದೇಶ ರಾಜ್ಯದವರಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ವಿಮಾನ ನಿಲ್ದಾಣದಲ್ಲಿ ಕೆಎಸ್‌ಐಡಿಸಿಯಲ್ಲಿ ಇಬ್ಬರು ಕ್ಯಾಬ್ ಚಾಲಕರಾಗಿದ್ದು, ಆತ್ಮೀಯ ಸ್ನೇಹಿತರಾಗಿದ್ದರು. ಕೆಲ ದಿನಗಳ ಹಿಂದೆ ಮುತ್ತುರಾಜ್‌ನಿಂದ ₹6 ಲಕ್ಷವನ್ನು ಲೋಕೇಶ್ ಸಾಲ ಪಡೆದಿದ್ದ. ಆದರೆ ಸಕಾಲಕ್ಕೆ ಸಾಲ ತೀರಿಸದ ಕಾರಣಕ್ಕೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು. ಅಂತೆಯೇ ಇದೇ ಹಣಕಾಸು ವಿಚಾರವಾಗಿ ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಉಂಟಾದ ಜಗಳವು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಕೆಐಎ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.