ಸಾರಾಂಶ
ಬೆಂಗಳೂರು : ಇತ್ತೀಚೆಗೆ ಬಿಹಾರ ಮೂಲದ ಕಾರ್ಮಿಕನನ್ನು ಹತ್ಯೆಗೈದು ನಿರ್ಜನಪ್ರದೇಶ ಪೊದೆಗೆ ಎಸೆದಿದ್ದ ಪ್ರಕರಣ ಸಂಬಂಧ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ನಿವಾಸಿ ಸಂತೋಷ್ ಕುಮಾರ್ ಅಲಿಯಾಸ್ ಬೂದಿ (19) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಆರೋಪಿಗಳು ಏ.5ರಂದು ಸಂಜೆ ಬಿಹಾರ ಮೂಲದ ಕಾರ್ಮಿಕ ವಿಕಾಸ್ ಕುಮಾರ್ ಮಾಚೋತ್ (25) ಎಂಬಾತನ ಕೊಲೆಗೈದು ಮೃತದೇಹವನ್ನು ಕರಿಹೋಬನಹಳ್ಳಿ ನಿರ್ಜನಪ್ರದೇಶದ ಪೊದೆಗೆ ಎಸೆದು ಹೋಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಇದೆ ಎಂದು ಭಾವಿಸಿ ಅಪಹರಿಸಿ ಕೊಲೆ : ಕೊಲೆಯಾದ ಬಿಹಾರ ಮೂಲದ ಕಾರ್ಮಿಕ ವಿಕಾಸ್ ಕಡಬಗೆರೆಯಲ್ಲಿ ನೆಲೆಸಿದ್ದ. ಏ.5ರಂದು ಸಂಜೆ ಆಂಧ್ರಹಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಮುಗಿಸಿಕೊಂಡು ಬಸ್ ಚಾರ್ಜ್ ಉಳಿಸುವ ಉದ್ದೇಶದಿಂದ ನಡೆದುಕೊಂಡೇ ಮನೆ ಕಡೆಗೆ ಹೊರಟ್ಟಿದ್ದ. ಕೈನಲ್ಲಿ ಬ್ಯಾಗ್ ಹಿಡಿದುಕೊಂಡು ವಿಕಾಸ್ ನಡೆದುಕೊಂಡು ಹೋಗುವುದನ್ನು ಗಮನಿಸಿದ್ದ ಆರೋಪಿಗಳು, ವಿಕಾಸ್ ಬಳಿಯಿರುವ ಬ್ಯಾಗ್‌ನಲ್ಲಿ ಹಣ ಇರಬಹುದು ಎಂದು ಭಾವಿಸಿ ಆತನನ್ನು ಅಪಹರಿಸಿ ಪಂಚಮುಖಿ ಬಡಾವಣೆಯ ಕರಿಹೋಬನಹಳ್ಳಿ ಕಡೆಗೆ ಎಳೆದೊಯ್ದು ಹಲ್ಲೆ ನಡೆಸಿದ್ದರು. ಆದರೆ, ವಿಕಾಸ್‌ನ ಬಳಿ ಯಾವುದೇ ಹಣ ಇರಲಿಲ್ಲ. ಅಷ್ಟರಲ್ಲಿ ಆರೋಪಿಗಳ ಹಲ್ಲೆಯಿಂದ ವಿಕಾಸ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ. ಹೀಗಾಗಿ ಆರೋಪಿಗಳು ವಿಕಾಸ್‌ನ ಮೃತದೇಹವನ್ನು ಕರಿಹೋಬನಹಳ್ಳಿಯ ನಿರ್ಜನಪ್ರದೇಶದ ಪೊದೆಗೆ ಎಸೆದು ಪರಾರಿಯಾಗಿದ್ದರು.
ಮಾರನೇ ದಿನ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದರು. ಆಂಭದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಮೃತ ವ್ಯಕ್ತಿ ಬಿಹಾರ ಮೂಲದ ಕಾರ್ಮಿಕ ವಿಕಾಸ್ ಎಂಬುದು ಗೊತ್ತಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ವಿಕಾಸ್ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಸದ್ಯ ಪೀಣ್ಯ ಠಾಣೆ ಪೊಲೀಸರು ಇಬ್ಬರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.