ತಂಗಿ, ತಾಯಿ ಬಗ್ಗೆ ಕೆಟ್ಟದಾಗಿ ಮಾತಾಡಿದವನ ಹತ್ಯೆ: ಇಬ್ಬರ ಸೆರೆ

| Published : Jan 25 2024, 02:01 AM IST

ತಂಗಿ, ತಾಯಿ ಬಗ್ಗೆ ಕೆಟ್ಟದಾಗಿ ಮಾತಾಡಿದವನ ಹತ್ಯೆ: ಇಬ್ಬರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ತಂಗಿಯನ್ನು ಚುಡಾಯಿಸುತ್ತಿದ್ದ, ಅಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಯುವಕನ ಹತ್ಯೆ ಮಾಡಿದ ಇಬ್ಬರನ್ನು ಬಂಧಿಸಿದ ಬೆಂಗಳೂರು ಪೊಲೀಸರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಂಗಿಯನ್ನು ಚುಡಾಯಿಸುತ್ತಿದ್ದಲ್ಲದೇ ತಾಯಿಯ ಚಾರಿತ್ರ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ನಗರ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಟೌನ್‌ ಟಿಪ್ಪುನಗರ ನಿವಾಸಿಗಳಾದ ಸೈಯದ್‌ ಇಲಿಯಾಸ್‌ (20) ಮತ್ತು ಜಹೀರ್‌ ಅಲಿಯಾಸ್‌ ಕಾಲು (20) ಬಂಧಿತರು. ಆರೋಪಿಗಳು ಜ.20ರ ರಾತ್ರಿ ರಾಮನಗರ ರೈಲು ನಿಲ್ದಾಣ ಸಮೀಪ ರೈಲು ಹಳಿ ಬಳಿ ತಮ್ಮದೇ ಏರಿಯಾದ ಅರ್ಬಾಜ್‌ ಪಾಷ (24) ಎಂಬಾತನ ಮೇಲೆ ಹಲ್ಲೆ ಮಾಡಿ ಬಳಿಕ ತಲೆಯ ಮೇಲೆ ಸಿಮೆಂಟ್‌ ಕಾಂಕ್ರಿಟ್‌ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?:

ಕೊಲೆಯಾದ ಅರ್ಬಾಜ್‌ ಮತ್ತು ಆರೋಪಿಗಳು ಒಂದೇ ಪ್ರದೇಶದವರು. ಮೂವರು ರೇಷ್ಮೆ ನೇಯುವ ಕೆಲಸ ಮಾಡಿಕೊಂಡಿದ್ದು, ಐದಾರು ವರ್ಷಗಳಿಂದ ಪರಿಚಿತರಾಗಿದ್ದರು. ಈ ನಡುವೆ ಅರ್ಬಾಜ್‌, ಜಹೀರ್‌ನ 17 ವರ್ಷದ ತಂಗಿಯನ್ನು ಚುಡಾಯಿಸುವುದು, ಶಾಲೆ ಬಳಿ ತೆರಳಿ ರೇಗಿಸುತ್ತಿದ್ದ, ಜತೆಗೆ ಅರ್ಬಾಜ್‌, ಜಹೀರ್‌ನ ತಾಯಿಯ ಚಾರಿತ್ರ್ಯದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ. ಈ ವಿಚಾರ ಗೊತ್ತಾಗಿ ಜಹೀರ್‌ ಕೋಪಗೊಂಡಿದ್ದ. ಸ್ನೇಹಿತ ಸೈಯದ್‌ ಇಲಿಯಾಸ್‌ ಜತೆಗೆ ಈ ವಿಚಾರ ಹಂಚಿಕೊಂಡು ಬಳಿಕ ಇಬ್ಬರೂ ಅರ್ಬಾಜ್‌ಗೆ ತಕ್ಕಪಾಠ ಕಲಿಸಲು ಸಂಚು ರೂಪಿಸಿದ್ದರು.

ಪಾರ್ಟಿಗೆ ಕರೆಸಿ ಮದ್ಯ ಸೇವನೆ:

ಆರೋಪಿಗಳು ಜ.20ರಂದು ರಾತ್ರಿ ಅರ್ಬಾಜ್‌ ಮೊಬೈಲ್‌ಗೆ ಕರೆ ಮಾಡಿ ಮದ್ಯ ಕುಡಿಯಲು ಆಹ್ವಾನಿಸಿ ಮೂವರು ರಾಮನಗರದ ಬಾರ್‌ವೊಂದರಲ್ಲಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಜಹೀರ್‌ ತನ್ನ ತಂಗಿ ಮತ್ತು ತಾಯಿಯ ವಿಚಾರ ಪ್ರಸ್ತಾಪಿಸಿ ಅರ್ಬಾಜ್‌ನನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತಿಗೆ ನಡೆದು ಸಣ್ಣ ಜಗಳವಾಗಿದೆ. ಬಳಿಕ ಜಹೀರ್‌ ಮತ್ತು ಇಲಿಯಾಸ್‌ ಇಬ್ಬರು ಸೇರಿ ಅರ್ಬಾಜ್‌ನನ್ನು ರಾಮನಗರದ ರೈಲು ನಿಲ್ದಾಣ ಸಮೀಪದ ರೈಲ್ವೆ ಹಳಿ ಬಳಿ ಕರೆದೊಯ್ದು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲೇ ಬಿದ್ದಿದ್ದ ಸಿಮೆಂಟ್‌ ಕಾಂಕ್ರಿಟ್‌ ಇಟ್ಟಿಗೆಯನ್ನು ಅರ್ಬಾಜ್‌ ತಲೆಗೆ ಮೇಲೆ ಎತ್ತಿ ಹಾಕಿ ಕೊಲೆಗೈದು ಪರಾರಿಯಾಗಿದ್ದರು.

ಮೃತನ ಪ್ಯಾಂಟ್‌ ಜೇಬಲ್ಲಿತ್ತು ಚೀಟಿ:

ಜ.21ರಂದು ಮಧ್ಯಾಹ್ನ 3.30ರ ಸುಮಾರಿಗೆ ರಾಮನಗರ ರೈಲು ನಿಲ್ದಾಣದ ಸ್ಟೇಷನ್‌ ಮಾಸ್ಟರ್‌ ರೈಲ್ವೆ ಹಳಿ ಪಕ್ಕ ಅಪರಿಚಿತ ಮೃತದೇಹ ಬಿದ್ದಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರರಿಗೆ ಕೊಲೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಖದ ಗುರುತು ಪತ್ತೆಯಾಗಿಲ್ಲ. ಬಳಿಕ ಮೃತ ವ್ಯಕ್ತಿಯ ಪ್ಯಾಂಟಿನ ಜೇಬು ಪರಿಶೀಲಿಸಿದಾಗ ಮೊಬೈಲ್‌ ಸಂಖ್ಯೆ ಬರೆದಿದ್ದ ಚೀಟಿಯೊಂದು ಪತ್ತೆಯಾಗಿದೆ. ಆ ಚೀಟಿಯ ತೆಗೆದು ಆ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಕೊಲೆಯಾದ ವ್ಯಕ್ತಿ ಅರ್ಬಾಜ್‌ ಎಂಬುದು ಗೊತ್ತಾಗಿದೆ.

ಬಳಿಕ ಅರ್ಬಾಜ್‌ ಮೊಬೈಲ್‌ ಕರೆಗಳ ಸಿಡಿಆರ್‌ ತೆಗೆದು ಪರಿಶೀಲಿಸಿದಾಗ ಜ.20ರ ರಾತ್ರಿ ಜಹೀರ್‌ ಮತ್ತು ಇಲಿಯಾಸ್‌ ಕರೆ ಮಾಡಿರುವುದು ಗೊತ್ತಾಗಿದೆ. ಬಳಿಕ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆಟ್ರೋಲ್‌ ಸುರಿದು ಸುಡಲು ಪ್ಲಾನ್:

ಆರೋಪಿಗಳು ಅರ್ಬಾಜ್‌ನ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡಿದ್ದರು. ಬಳಿಕ ಪೆಟ್ರೋಲ್‌ ತೆಗೆದುಕೊಂಡು ಅರ್ಬಾಜ್‌ನ ಮೃತದೇಹದ ಮೇಲೆ ಸುರಿದು ಬೆಂಕಿ ಹಚ್ಚಿ ಸುಡಲು ಪ್ಲಾನ್‌ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಆ ಪ್ಲಾನ್‌ನಿಂದ ಹಿಂದೆ ಸರಿದಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.