ಸ್ಪಾ ಸುಲಿಗೆ ಕೇಸ್‌ ಆರೋಪಿ ನಿರೂಪಕಿ ದಿವ್ಯಾ ವಸಂತಾ ಸೆರೆ

| Published : Jul 12 2024, 01:35 AM IST / Updated: Jul 12 2024, 05:10 AM IST

ಸಾರಾಂಶ

ಸ್ಪಾ ಸುಲಿಗೆ ಪ್ರಕರಣದಲ್ಲಿ ಆರೋಪಿ ಆಗಿದ್ದ ನಿರೂಪಕಿ ದಿವ್ಯಾ ವಸಂತಾಳನ್ನು ಕೇರಳದಲ್ಲಿ ಬಂಧಿಸಲಾಗಿದೆ.

 ಬೆಂಗಳೂರು ;  ಇಂದಿರಾ ನಗರದ ‘ಸ್ಪಾ’ ವ್ಯವಸ್ಥಾಪಕನಿಗೆ ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ನಿರೂಪಕಿ ದಿವ್ಯಾ ವಸಂತಾ ಹಾಗೂ ಆಕೆಯ ಸ್ನೇಹಿತನನ್ನು ಜೆ.ಬಿ.ನಗರ ಠಾಣೆ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಸುಲಿಗೆ ಯತ್ನ ಕೃತ್ಯ ಬೆಳಕಿಗೆ ಬಂದ ನಂತರ ರಾತ್ರೋರಾತ್ರಿ ನಗರ ತೊರೆದು ಹೊರ ರಾಜ್ಯಕ್ಕೆ ದಿವ್ಯಾ ವಸಂತಾ ಪರಾರಿಯಾಗಿದ್ದಳು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಕೇರಳದ ಪಾಲಕ್ಕಾಡ್‌ನಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ವಸಂತಾ ಹಾಗೂ ಆಕೆಯ ಸ್ನೇಹಿತ ಸಚಿನ್‌ನನ್ನು ಪೊಲೀಸರು ಪತ್ತೆ ಹಚ್ಚಿ ನಗರಕ್ಕೆ ಕರೆತರುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೆಲ ದಿನಗಳ ಹಿಂದೆ ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರೀ ಸ್ಪಾ ಆ್ಯಂಡ್‌ ಬ್ಯೂಟಿ’ ಪಾರ್ಲರ್‌ನ ವ್ಯವಸ್ಥಾಪಕ ಶಿವಶಂಕರ್‌ ಅವರಿಗೆ ವೇಶ್ಯಾವಾಟಕೆ ನಡೆದಿದೆ ಎಂದು ರಾಜ್‌ ನ್ಯೂಸ್ ಹೆಸರಿನಲ್ಲಿ ಬೆದರಿಸಿ ₹15 ಲಕ್ಷ ಸುಲಿಗೆಗೆ ರಾಜಾನುಕುಂಟೆ ವೆಂಕಟೇಶ್ ಹಾಗೂ ದಿವ್ಯಾ ವಸಂತಾ ಸೇರಿ ಇತರರು ಯತ್ನಿಸಿದ್ದರು. ಈ ಪ್ರಕರಣದಲ್ಲಿ ರಾಜ್ ನ್ಯೂಸ್ ಸಿಇಒ ಎಂದು ಹೇಳಿಕೊಂಡಿದ್ದ ವೆಂಕಟೇಶ್‌ ಹಾಗೂ ದಿವ್ಯಾ ವಸಂತಾಳ ಸೋದರ ಸಂದೇಶ್‌ ಬಂಧನವಾಗಿತ್ತು. ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ದಿವ್ಯಾ ವಸಂತಾ ಹಾಗೂ ಆಕೆಯ ಸ್ನೇಹಿತ ಸಚಿನ್ ಕೊನೆಗೆ ಪೊಲೀಸರು ಬಲೆಗೆ ಬಿದ್ದಿದ್ದಾರೆ.

ಇಂದಿರಾನಗರದ ಸ್ಪಾಗೆ ಈಶಾನ್ಯ ಭಾರತ ಮೂಲದ ಯುವತಿಯೊಬ್ಬಳನ್ನು ಆರೋಪಿಗಳು ಕೆಲಸಕ್ಕೆ ಸೇರಿಸಿದ್ದರು. ಬಳಿಕ ಆ ಸ್ಪಾಗೆ ತಮ್ಮ ತಂಡದ ಸದಸ್ಯನನ್ನು ಮಸಾಜ್‌ಗೆ ಮಾಡಿಸಿಕೊಳ್ಳುವ ಗ್ರಾಹಕನ ಸೋಗಿನಲ್ಲಿ ಕಳುಹಿಸಿದ್ದರು. ಪೂರ್ವ ಯೋಜಿತ ಸಂಚಿನಂತೆ ತಮ್ಮ ಪರಿಚಿತ ಯುವತಿ ಬಳಿಯೇ ಮಸಾಜ್‌ಗೆ ಆತ ಬುಕ್ ಮಾಡಿದ್ದ. ಆಗ ಸಲುಗೆಯಿಂದ ಇರುವ ದೃಶ್ಯಾವಳಿಯನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸ್ಪಾ ವ್ಯವಸ್ಥಾಪಕನಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಸುಲಿಗೆ ಆರೋಪಿಗಳು ಯತ್ನಿಸಿದ್ದರು. ಈ ಕೃತ್ಯದಲ್ಲಿ ರಾಜಾನುಕುಂಟೆ ವೆಂಕಟೇಶ್, ದಿವ್ಯಾ ವಸಂತಾ, ಆಕೆಯ ಸೋದರ ಸಂದೇಶ್, ಆಕಾಶ್ ಹಾಗೂ ಸಚಿನ್ ಪಾತ್ರವಹಿಸಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು.