ಪ್ರಜ್ವಲ್‌ ಕೇಸು ಸಿಬಿಐಗಿಲ್ಲ: ಸಚಿವ ಪರಮೇಶ್ವರ್

| Published : May 09 2024, 08:55 AM IST

Parameshwar
ಪ್ರಜ್ವಲ್‌ ಕೇಸು ಸಿಬಿಐಗಿಲ್ಲ: ಸಚಿವ ಪರಮೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯತೆ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು :  ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯತೆ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಎಸ್‌ಐಟಿ ತಂಡವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ ಐದು ಮಂದಿ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಮೂರು ಮಂದಿಯನ್ನು ಬಂಧಿಸಲಾಗಿದೆ. ಪ್ರಜ್ವಲ್‌ಗೆ 197 ದೇಶಗಳಲ್ಲಿ ಬ್ಲ್ಯೂ ಕಾರ್ನರ್‌ ನೋಟಿಸ್‌ ಜಾರಿ ಮಾಡಿದ್ದು, ಪ್ರಜ್ವಲ್‌ ಬರುವ ತನಕ್ಕೆ ಹೆಚ್ಚಿನ ವಿಚಾರಣೆ ಕಷ್ಟ ಎಂದು ಹೇಳಿದರು.

ಸದಾಶಿವನಗರದ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ಎಸ್‌ಐಟಿ ತನಿಖೆ ಯಾವ ರೀತಿ ನಡೆಯುತ್ತದೆ ಎಂಬುದು ಅವರಿಗೆ ಗೊತ್ತಿದೆ. ಎಸ್‌ಐಟಿ ತನಿಖೆ ಯಾವ ರೀತಿ ಮುಂದುವರಿಯುತ್ತಿದೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ. ರಾಜಕೀಯಕ್ಕಾಗಿ ನೀಡುವ ಹೇಳಿಕೆಗಳನ್ನು ಹೊರತುಪಡಿಸಿದರೆ ತನಿಖೆ ಸರಿಯಾದ ದಾರಿಯಲ್ಲಿ ಹೋಗುತ್ತಿದೆ. ಹೀಗಾಗಿ ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

2008-2013ರವರೆಗೆ ಅಂದಿನ ಸರ್ಕಾರ ಯಾವುದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿಲ್ಲ.‌ ಕೆಲವು ಪ್ರಕರಣಗಳಲ್ಲಿ ಸಿಬಿಐ ಕೊಟ್ಟ ವರದಿಯನ್ನು ಜನರು ಒಪ್ಪಿಲ್ಲ. ಅಂತಹ ಪ್ರಕರಣಗಳ ಸಿಬಿಐ ಕಾರ್ಯವೈಖರಿಯನ್ನು ಟೀಕಿಸಿದ್ದನ್ನು ನೋಡಿದ್ದೇವೆ. ಸಿಬಿಐ ಅಂದ ತಕ್ಷಣ ಏನೋ ಆಗಿ ಬಿಡುತ್ತದೆ ಎಂಬ ಪರಿಕಲ್ಪನೆ ಬೇಡ ಎಂದರು.

ಪ್ರಜ್ವಲ್‌ ಜರ್ಮನಿಯಲ್ಲೇ ಇರಬಹುದು:

ಸಂಸದ ಪ್ರಜ್ವಲ್ ರೇವಣ್ಣ ದೇಶ‌ ಬಿಟ್ಟು ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರನ್ನು ಕರೆತರಲು 197 ದೇಶಗಳಿಗೆ ಬ್ಲೂ ಕಾರ್ನರ್‌ ನೋಟಿಸ್ ಹೊರಡಿಸಲಾಗಿದೆ. ಅವರು ಜರ್ಮನಿಗೆ ಹೋಗಿರುವ ಟಿಕೆಟ್‌ ಸಿಕ್ಕಿರುವುದರಿಂದ ಜರ್ಮನಿಗೆ ಹೋಗಿರುವುದು ಖಚಿತವಾಗಿದೆ. ಅಲ್ಲಿಂದ ಅವರು ಎಲ್ಲಿಗೂ ಟಿಕೆಟ್‌ ಬುಕ್‌ ಮಾಡಿಲ್ಲ. ವಿಶೇಷ ವಿಮಾನದಲ್ಲಿ ಹೋಗಿದ್ದರೂ ಮಾಹಿತಿ ಸಿಗುತ್ತಿತ್ತು. ಹೀಗಾಗಿ ಜರ್ಮನಿಯಲ್ಲೇ ಇರಬಹುದು ಎಂದು ಪರಮೇಶ್ವರ್‌ ತಿಳಿಸಿದರು.

ಪೆನ್‌ಡ್ರೈವ್ ಹಂಚಿಕೆ ಹಾಗೂ ಬಹಿರಂಗದ ಬಗ್ಗೆಯೂ ತನಿಖೆಯಾಗಲಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರನ್ನು ವಿಚಾರಣೆ ನಡೆಸುವ ನಿರ್ಧಾರ ಎಸ್ಐಟಿ ಮಾಡಲಿದೆ. ಪ್ರಕರಣದಲ್ಲಿ ಕೆಲವರನ್ನು ವಿಚಾರಣೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಯಾವಾಗ ವಿಚಾರಣೆ ನಡೆಸಬೇಕು, ಯಾವಾಗ ಬಂಧಿಸಬೇಕು ಎಂಬುದು ನಮ್ಮ ಕೈಯಲ್ಲಿ ಇಲ್ಲ. ಎಸ್ಐಟಿ ನಿರ್ಧರಿಸಲಿದೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾರನ್ನು ವಿಚಾರಣೆ ಮಾಡಬೇಕು ಎಂಬುದು ಎಸ್‌ಐಟಿಗೆ ಬಿಟ್ಟ ವಿಚಾರ. ಡಿ.ಕೆ. ಶಿವಕುಮಾರ್‌ ಜವಾಬ್ದಾರಿಯುತ ಸ್ಥಾನದಲ್ಲಿರುವವರು. ತಪ್ಪು ಮಾಡಿದ್ದರೆ ಅವರನ್ನು ವಿಚಾರಣೆ ಮಾಡಬಾರದು ಎಂದೇನಿಲ್ಲ. ಆದರೆ ಅದನ್ನು ಎಸ್‌ಐಟಿ ಪರಿಶೀಲಿಸುತ್ತದೆ ಎಂದರು.

ಕಾರ್ತಿಕ್‌ ಹಾಗೂ ದೇವರಾಜೇಗೌಡ ಅವರನ್ನು ಬಂಧಿಸುತ್ತೀರಾ ಎಂಬ ಪ್ರಶ್ನೆಗೆ, ತಾಂತ್ರಿಕವಾಗಿ ಕಾನೂನು ಪ್ರಕಾರ ಬಂಧಿಸಲು ನಿಖರವಾದ ಸಾಕ್ಷ್ಯಗಳು ಇರಬೇಕು. ಇಲ್ಲದಿದ್ದರೆ ಜಾಮೀನು ಸಿಗುತ್ತದೆ. ಅವರ ಹೇಳಿಕೆಯನ್ನು ಎಸ್ಐಟಿ ಪಡೆದುಕೊಂಡಿದೆ. ಹೇಳಿಕೆಯನ್ನು ಪುನರ್ ಪರಿಶೀಲಿಸುತ್ತಾರೆ. ಪ್ರಕರಣದ ಸಂತ್ರಸ್ತರಿಗೆ ಹೊರತುಪಡಿಸಿ, ಇಂತವರಿಗೆಲ್ಲ ರಕ್ಷಣೆ ಕೊಡುವುದಿಲ್ಲ. ಬಂಧಿಸಲು ಬೇಕಾದ ಅಗತ್ಯ ಸಾಕ್ಷ್ಯ ಸಿಕ್ಕ ಕೂಡಲೇ ಬಂಧಿಸಲಿದ್ದಾರೆ ಎಂದರು.

ಬೆನ್ನುಮೂಳೆ ಇರುವುದರಿಂದ ಜನ ಅಧಿಕಾರ ನೀಡಿದ್ದಾರೆ

ನಮಗೆ ಬೆನ್ನು ಮೂಳೆ ಇರುವುದರಿಂದಲೇ ರಾಜ್ಯದ ಜನ 135 ಸೀಟುಗಳನ್ನು ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ. ನನಗೆ ಬೆನ್ನು ಮೂಳೆ ಇರುವ ಬಗ್ಗೆ 14 ತಿಂಗಳು ನಮ್ಮ ಜತೆ ಕೆಲಸ ಮಾಡಿದಾಗ ಗೊತ್ತಾಗಲಿಲ್ಲವೇ? ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಡಾ.ಜಿ. ಪರಮೇಶ್ವರ್‌ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರು ತಾವೇ ಅಧಿಕಾರದಲ್ಲಿ ಕೂರಬೇಕು ಎಂಬ ಆಸೆ ಇತ್ತು. ಪಾಪ ಅದು ಅವರಿಗೆ ಆಗಲಿಲ್ಲ. ನಾವು ಅಧಿಕಾರದಲ್ಲಿದ್ದೀವಿ ಅಂತ ಕುಮಾರಸ್ವಾಮಿ ಅವರು ಸಂತೋಷಪಡಬೇಕು ಎಂದು ವ್ಯಂಗ್ಯವಾಡಿದರು.

ವಿಷಯ ಗೊತ್ತಿರಬಾರದೇ?:-

ಎಸ್ಐಟಿ ಅಧಿಕಾರಿಗಳಿಗೆ ಪ್ರಕರಣದ ತನಿಖೆಯನ್ನು ಹೀಗೆಯೇ ಮಾಡಿ ಅಂತ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಗೆ, ಗೃಹ ಸಚಿವರಿಗೆ ಪ್ರಕರಣದ ಮಾಹಿತಿ ಇರಬೇಕಲ್ಲವೇ? ಹೀಗಾಗಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಟ್‌ ಕಾಯಿನ್‌ ವಿಚಾರವಾಗಿ ಪ್ರತಿಕ್ರಿಯಿಸಿ, ಹಗರಣದ ಸಂಬಂಧ ಶ್ರೀಕಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಯಾರೆಲ್ಲಾ ತಪ್ಪಿತಸ್ಥರಿದ್ದಾರೆ ಎಲ್ಲರನ್ನೂ ಎಸ್‌ಐಟಿ ಪತ್ತೆ ಹಚ್ಚಲಿದೆ ಎಂದು ಪರಮೇಶ್ವರ್‌ ತಿಳಿಸಿದರು.