ಸಾರಾಂಶ
ಬೆಂಗಳೂರು : ಕಾನೂನು ಉಲ್ಲಂಘನೆ ಹಿನ್ನೆಲೆಯಲ್ಲಿ ನಗರದಲ್ಲಿರುವ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಬಿಬಿಎಂಪಿ ಸೋಮವಾರ ಮೂರನೇ ನೋಟಿಸ್ ಜಾರಿ ಮಾಡಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮುಂಭಾಗದ ಎಂ.ಜಿ.ರಸ್ತೆಯಲ್ಲಿರುವ ರತ್ನಂ ಕಾಂಪ್ಲೆಕ್ಸ್‌ನ ಬಹುಮಹಡಿ ಕಟ್ಟಡದ ಮೇಲೆ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲಾಗುತ್ತಿದೆ. ಈ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲು ಅಗ್ನಿಶಾಮಕ ದಳದಿಂದ ನಕ್ಷೆ, ಪ್ರಮಾಣ ಪತ್ರ, ಎನ್‌ಒಸಿ ಪರವಾನಗಿ ಪಡೆಯದೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಬಿಬಿಎಂಪಿಗೆ ದೂರು ಬಂದ ಹಿನ್ನೆಲೆಯಲ್ಲಿ ಶಾಂತಿನಗರದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಎರಡು ನೋಟಿಸ್‌ಗೂ ಉತ್ತರವಿಲ್ಲ:
ಕಳೆದ ನವೆಂಬರ್ 25ರಂದು ಬಾರ್ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನವೆಂಬರ್ 29 ಹಾಗೂ ಡಿಸೆಂಬರ್ 9ರಂದು ನೋಟಿಸ್ ನೀಡಲಾಗಿತ್ತು. ಈವರೆಗೆ ಬಾರ್ ಮಾಲೀಕರಿಂದ ಉತ್ತರ ಬಾರದ ಕಾರಣ ಕೊನೆಯ ಹಾಗೂ ಮೂರನೇ ನೋಟಿಸ್ ಅನ್ನು ಸೋಮವಾರ ಜಾರಿ ಮಾಡಲಾಗುವುದು, ಏಳು ದಿನದೊಳಗೆ ಉತ್ತರ ನೀಡದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿಯ ಶಾಂತಿನಗರದ ಆರೋಗ್ಯಾಧಿಕಾರಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.