ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಜನಸಾಮಾನ್ಯರನ್ನು ಒಳಗೊಂಡು ಹೊಸ ಪ್ರಯೋಗದ ಸ್ವಾತಂತ್ರ್ಯ ಹೋರಾಟ ನಡೆಸಿದ ಗಾಂಧೀಜಿ ಅವರ ಜೀವನ ಹಾಗೂ ತಿಳಿಸಿದ ವಿಚಾರಗಳಿಂದ ಬದುಕಿಗೆ ಸದಾ ಸ್ಫೂರ್ತಿಯಾಗುತ್ತಾರೆ ಎಂದು ಮಾಜಿ ಸಭಾಪತಿ ಡಾ। ಬಿ.ಎಲ್.ಶಂಕರ್ ಹೇಳಿದರು.‘ಗಾಂಧಿ ಅಧ್ಯಯನ ಕೇಂದ್ರ’, ‘ಕರ್ನಾಟಕ ಗಾಂಧಿ ಸ್ಮಾರಕ ನಿಧಿ’ ಬುಧವಾರ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ್ದ ‘ಬಾಪೂ ನಂತರದ ಭಾರತ, ಆಶಯ ಮತ್ತು ಸವಾಲುಗಳು’ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಬರುವವರೆಗೆ ಸ್ವಾತಂತ್ರ್ಯ ಹೋರಾಟ ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಜನತೆಯನ್ನು ಹೋರಾಟದಲ್ಲಿ ತೊಡಗಿಸಿಕೊಂಡಿದ್ದು ಅವರ ಚತುರತೆಯ ನಿದರ್ಶನ. ಸತ್ಯಾಗ್ರಹ, ಉಪವಾಸ, ಪಾದಯಾತ್ರೆಯಂತಹ ಹೊಸ ಪ್ರಯೋಗ ಮಾಡುತ್ತ ಅಹಿಂಸಾ ಸ್ವರೂಪದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ತೋರಿಸಿದವರು ಗಾಂಧೀಜಿ. ಅವರು ದೈವತ್ವದ ಸ್ಥಾನಕ್ಕೆ ಏರಿದ್ದರೆ ಅದಕ್ಕೆ ಅವರು ಜೀವನ ನಡೆಸಿದ ರೀತಿಯೇ ಕಾರಣ ಎಂದರು.ಗಾಂಧೀಜಿ ಬಗ್ಗೆ ಮಾತನಾಡುವುದಕ್ಕೂ ಗಟ್ಟಿಯಾದ ನೈತಿಕತೆ ಅಗತ್ಯ. ಇಡೀ ಪ್ರಪಂಚದಲ್ಲಿ ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಹೇಳಿದ ಮತ್ತೊಬ್ಬ ನಾಯಕ ಇಲ್ಲ. ಹೋರಾಟದ ವಿಚಾರಕ್ಕೆ ಬಂದಾಗ ಜಯಪ್ರಕಾಶ್ ನಾರಾಯಣ್ ಅವರು ಗಾಂಧೀಜಿಯವರ ಸನಿಹಕ್ಕೆ ಬರುತ್ತಾರಾದರೂ ಅಧಿಕಾರ ರಾಜಕಾರಣದಲ್ಲಿ ಮಹಾತ್ಮರು ಏರಿದ ಎತ್ತರಕ್ಕೆ ಯಾರು ಬರಲಾರರು ಎಂದರು.
ಗಾಂಧಿಯವರನ್ನು ಲೇವಡಿ ಮಾಡುವವರಿಗೆ ಲಾಭ ಇರುವ ಕಾಲಘಟ್ಟದಲ್ಲಿ ನಾವಿರುವುದು ಖೇಧನೀಯ. ಗಾಂಧೀಜಿ ಅವರನ್ನು ಯಾರು ಒಪ್ಪಲಿ ಬಿಡಲಿ, ಗೋಡ್ಸೆಗೆ ದೇವಸ್ಥಾನವನ್ನೇ ಕಟ್ಟಲಿ. ಆದರೆ, ಗಾಂಧೀಜಿ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.ಕೇಂದ್ರೀಯ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಚಂದ್ರಶೇಖರ್ ಮಾತನಾಡಿ, ಸಮಾಜ ಸುಧಾರಣೆ, ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ಆಗಿನ ಮುಖಂಡರ ಧ್ಯೇಯವಾಗಿತ್ತು. ಆದರೆ, ಗಾಂಧಿಯವರು ಯಾವುದೇ ಒಂದು ಚೌಕಟ್ಟಿಗೆ ಸೀಮಿತ ಆದವರಲ್ಲ. ರಾಜಕೀಯ ಆಧ್ಯಾತ್ಮಿಕರಣ ಆಗಬೇಕು ಎಂಬ ಅವರ ಕರೆ ವಿಶಿಷ್ಟವಾದುದು ಎಂದರು.
ಅವರು ಕೇವಲ ನಾಯಕರನ್ನು ನಂಬಿಕೊಂಡು ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ. ಸಾಂಸ್ಥಿಕತೆಗೆ ಸೀಮಿತವಾಗದೆ ಎಲ್ಲರಿಗೂ ಒಪ್ಪಿಗೆಯಾಗುವ ವಿಚಾರಗಳ ಜೊತೆಗೆ, ಅನಕ್ಷರಸ್ಥರು, ಮಹಿಳೆಯರ ಕೈಗೆ ಹೋರಾಟವನ್ನು ಕೊಟ್ಟಿದ್ದು ಅವರ ಹೆಗ್ಗಳಿಕೆ. ಮುಸ್ಲಿಮರನ್ನು ಸಕ್ರಿಯವಾಗಿ ಹೋರಾಟಕ್ಕೆ ಬರುವಂತೆ ಮಾಡಿದ್ದು ಅವರ ಯಶಸ್ಸು ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಡಾ.ವೂಡೇ ಪಿ.ಕೃಷ್ಣ, ಗಾಂಧೀಜಿ ಬಯಸಿದ ಆಡಳಿತ ವ್ಯವಸ್ಥೆ ಇಂದು ಇದೆಯಾ ಎಂಬ ಪ್ರಶ್ನೆ ನಮ್ಮ ಎದುರಿಗಿದೆ. ಅಧಿಕಾರ ವಿಕೇಂದ್ರೀಕರಣದ ಬದಲು ಅಧಿಕಾರ ಕೇಂದ್ರೀತ ರಾಜಕಾರಣ ಕಾಣುತ್ತಿದ್ದೇವೆ. ಹಳ್ಳಿಗೂ ದಿಲ್ಲಿಯ ಸಂದೇಶ ಬರುವ ವಾತಾವರಣದಲ್ಲಿ ಇದ್ದೇವೆ. ಅವರು ಬಯಸಿದಂತೆ ಸಾಮಾಜಿಕ, ನೈತಿಕ, ಆರ್ಥಿಕ ಸ್ವಾತಂತ್ರ್ಯ ಪಡೆಯುವತ್ತ ಹೆಜ್ಜೆ ಇಡಬೇಕಿದೆ ಎಂದರು.
ಪ್ರೊ. ಎಂ.ಜಿ.ಚಂದ್ರಶೇಖರಯ್ಯ, ಡಾ। ಎ.ನಾರಾಯಣ ವಿಷಯ ಮಂಡಿಸಿದರು. ಪ್ರಾಚಾರ್ಯ ಪ್ರೊ.ಬಿ.ಜಿ.ಭಾಸ್ಕರ್ ಇದ್ದರು.