ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಆಧಾರ್ ಕಾರ್ಡ್‍ನಲ್ಲಿ ಜನ್ಮದಿನಾಂಕ ತಿದ್ದುಪಡಿ ಮಾಡಿ ಬಾಲ್ಯ ವಿವಾಹ ಮಾಡಲು ಹೊರಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ಮದುವೆ ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿರುವ ಘಟನೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.ತಾಲೂಕಿನ ಸಮುದಾಯ ಭವನವೊಂದರಲ್ಲಿ ಮಂಗಳವಾರ ತಡರಾತ್ರಿ ಬಾಲ್ಯ ವಿವಾಹ ನಡೆಸುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಬಂದ ಕರೆ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬಾಲ್ಯವಿವಾಹ ನಡೆಸಲು ಯತ್ನಿಸುತ್ತಿರುವುದು ಖಚಿತವಾಗಿದೆ. ಈ ಹಿನ್ನೆಲೆ ಬಾಲಕಿಯನ್ನು ರಕ್ಷಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
18 ವರ್ಷಕ್ಕೆ 6 ತಿಂಗಳು ಬಾಕಿ:ಬೆಂಗಳೂರು ಉತ್ತರ ತಾಲೂಕು ಮೂಲದ ಬಾಲಕಿಯ ಜೊತೆ ನೆಲಮಂಗಲದ ಯುವಕನ ಮದುವೆ ನಿಶ್ಚಯವಾಗಿತ್ತು. ಯುವಕನಿಗೆ ಬಾಲಕಿ ದೂರದ ಸಂಬಂಧಿ ಎನ್ನಲಾಗಿದ್ದು, ಬಾಲಕಿಗೆ 18 ವರ್ಷ ತುಂಬಲು ಇನ್ನೂ 6 ತಿಂಗಳು ಬಾಕಿ ಇತ್ತು. ಆದರೂ ವಿವಾಹ ಮಾಡಲು ಪಾಲಕರು ನಿರ್ಧರಿಸಿ, ಬುಧವಾರ ಮಾಂಗಲ್ಯ ಧಾರಣೆಗೆ ಮುಹೂರ್ತ ನಿಗದಿಪಡಿಸಲಾಗಿತ್ತು.
ಬಾಲ್ಯವಿವಾಹದ ಅರಿವಿದೆ:
ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬಾಲ್ಯ ವಿವಾಹ ನಿಷೇಧ ಕುರಿತು ಸಾಕಷ್ಟು ಅರಿವು ಮೂಡಿಸಲಾಗಿದೆ. ಈ ಬಗ್ಗೆ ಪಾಲಕರಿಗೂ ಅರಿವಿದೆ. ಆದ್ದರಿಂದಲೇ 18 ವರ್ಷ ತುಂಬದ ಬಾಲಕಿಯ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು:ಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾಘಟಕದ ಸಿಬ್ಬಂದಿ ಶ್ರೀನಿವಾಸ್, ಮುನಿರಾಜು, ರಾಜೇಶ್ವರಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ರಕ್ಷಣೆ ಮಾಡಿದ ಬಾಲಕಿಯನ್ನು ಆಕೆ ತಾಯಿಯೊಂದಿಗೆ ಸಖಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಬುಧವಾರ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಧಾರ್ ನಲ್ಲಿ ತಿದ್ದುಪಡಿ;ಆಧಾರ್ ಕಾರ್ಡನ್ನು ಯಾರು ಬೇಕಾದರೂ ಹೇಗೆ ಬೇಕಾದರೂ ತಿದ್ದಿಕೊಳ್ಳಬಹುದು ಎಂಬುದು ಈ ಪ್ರಕರಣದಿಂದ ಖಚಿತವಾಗಿದೆ. ಬಾಲಕಿಯ ನಿಜವಾದ ಜನ್ಮದಿನಾಂಕ ಜನ್ಮ ಪ್ರಮಾಣ ಪತ್ರದಂತೆ 2008ರ ಅಕ್ಟೋಬರ್ 21 ಆಗಿದೆ. ಆದರೆ ಆಧಾರ್‍ನಲ್ಲಿ 2007ರ ಅಕ್ಟೋಬರ್ 21 ಎಂದು ತಿದ್ದುಪಡಿ ಮಾಡಿರುವುದು ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ತಿಳಿದು ಬಂದಿದೆ.
ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು. ಇಲಾಖೆ ಸಿಬ್ಬಂದಿ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬಾಲಕಿಯ ಆಧಾರ್ ಕಾಡ್‍ನಲ್ಲಿ ಜನ್ಮದಿನಾಂಕ ಅ. 21, 2007 ಎಂದು ನಮೂದಾಗಿದೆ. ಹೆಚ್ಚುವರಿ ಪರಿಶೀಲನೆಗಾಗಿ ಮನೆಯಿಂದ ಜನ್ಮ ದಿನಾಂಕ ಪ್ರಮಾಣ ಪತ್ರ ತರಿಸಿ ಪರಿಶೀಲಿಸಿದಾಗ ಅದರಲ್ಲಿ ಅ.21, 2008 ಎಂದು ನಮೂದಾಗಿರುವುದು ಪತ್ತೆಯಾಗಿದೆ. ಆದ್ದರಿಂದ ಬಾಲಕಿ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವ ಸಲುವಾಗಿ ಆಕೆಯನ್ನು ರಕ್ಷಣೆ ಮಾಡಲಾಗಿದೆ.ಅನಿತಾಲಕ್ಷ್ಮೀ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ