ಸಾರಾಂಶ
ಮದ್ದೂರು : ಹಳೇ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತರಿಬ್ಬರ ನಡುವೆ ನಡೆದ ಕಲಹದಲ್ಲಿ ಓರ್ವನ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಹೊಸಕೆರೆ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಮಲ್ಲರಾಜು ಪುತ್ರ ಎಚ್.ಎಂ.ಮಧು (30) ಚಾಕು ಇರಿತದಿಂದ ಗಾಯಗೊಂಡು ಮೈಸೂರು ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಬೆಸಗರಹಳ್ಳಿ ಪೊಲೀಸರು ಇದೇ ಗ್ರಾಮದ ಕೊಂಟಿಲಿಂಗಯ್ಯ ಪುತ್ರ ವಿಕಾಸ್ ವಿರುದ್ಧ ಬಿಎನ್ಎಸ್ ಕಾಯ್ದೆ 109 ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ವಿಕಾಸ್ ಕಳೆದ ಫೆ.27ರಂದು ಹೊಸಕೆರೆ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಗಾಯಾಳು ಎಚ್.ಎಂ.ಮಧು ಮನೆ ಬಳಿ ಬಂದು ಆತನನ್ನು ಹೊರಗೆ ಕರೆತಂದು ನಂತರ ಇಬ್ಬರೂ ಪಾನಮತ್ತರಾಗಿದ್ದಾರೆ. ನಂತರ ತನ್ನ ಮನೆ ಬಳಿ ಮಧುನನ್ನು ಕರೆತಂದ ವಿಕಾಸ ಹಳೇ ದ್ವೇಷದ ಹಿನ್ನೆಲೆಯಲ್ಲಿ ಆತನೊಂದಿಗೆ ಮಾತಿನ ಚಕಮಕಿ ನಡೆಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ವಿಕಾಸ್ ತನ್ನಲ್ಲಿದ್ದ ಚಾಕುವಿನಿಂದ ಮಧು ಕುತ್ತಿಗೆಗೆ ಇರಿದು ಆತನ ಕೊಲೆಗೆ ವಿಫಲ ಯತ್ನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ನಂತರ ವಿಕಾಸ್ ತಲೆಮರಿಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ.