ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಟೂಲ್‌ ಕಿಟ್‌, ಬಂದಿದ್ದು ನಾಲ್ಕು ಕಲ್ಲು!

| Published : Apr 01 2024, 12:53 AM IST / Updated: Apr 01 2024, 06:03 AM IST

ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಟೂಲ್‌ ಕಿಟ್‌, ಬಂದಿದ್ದು ನಾಲ್ಕು ಕಲ್ಲು!
Share this Article
  • FB
  • TW
  • Linkdin
  • Email

ಸಾರಾಂಶ

ಆನ್‌ಲೈನ್‌ಲ್ಲಿ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಕೆಲಸಕ್ಕೆ ಬೇಕಾಗುವ ಟೂಲ್ ಕಿಟ್‌ ಅನ್ನು ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಪಾರ್ಸೆಲ್‌ನಲ್ಲಿ ನಾಲ್ಕು ಕಲ್ಲುಗಳು ಬಂದ ಘಟನೆ ಉತ್ತರ ಕನ್ನಡದ ಅಂಕೋಲದಾದಲ್ಲಿ ನಡೆದಿದೆ 

 ಅಂಕೋಲಾ :  ಆನ್‌ಲೈನ್‌ಲ್ಲಿ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಕೆಲಸಕ್ಕೆ ಬೇಕಾಗುವ ಟೂಲ್ ಕಿಟ್‌ ಅನ್ನು ಆರ್ಡರ್‌ ಮಾಡಿದ್ದ ವ್ಯಕ್ತಿಗೆ ಪಾರ್ಸೆಲ್‌ನಲ್ಲಿ ನಾಲ್ಕು ಕಲ್ಲುಗಳು ಬಂದ ಘಟನೆ ಉತ್ತರ ಕನ್ನಡದ ಅಂಕೋಲದಾದಲ್ಲಿ ನಡೆದಿದೆ. ಆನ್‌ಲೈನ್‌ ಕಂಪನಿಯ ವಿರುದ್ಧ ಸಿಟ್ಟಿಗೆದ್ದ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ತಾಲೂಕಿನ ಯುವಕರೊಬ್ಬರು ಮನೆಯ ಎಲೆಕ್ಟ್ರಿಕಲ್ ಕೆಲಸ ಮಾಡುವ ಉದ್ಯೋಗದಲ್ಲಿದ್ದು, ತಮ್ಮ ಕೆಲಸಕ್ಕೆ ಟೂಲ್ ಕಿಟ್ ಅವಶ್ಯವಿರುವುದರಿಂದ ಆನ್‌ಲೈನ್‌ನಲ್ಲಿ ಸುಮಾರು ₹5000 ಮೌಲ್ಯದ ಟೂಲ್ ಕಿಟ್ ಆರ್ಡರ್ ಮಾಡಿದ್ದರು.

ನಾಲ್ಕು ದಿನಗಳ ನಂತರ ಬಂದ ಪಾರ್ಸೆಲ್ ಬಿಚ್ಚಿ ನೋಡಿದ ಯುವಕನಿಗೆ ಆಘಾತ ಕಾದಿತ್ತು. ಟೂಲ್ ಕಿಟ್‌ ಬಾಕ್ಸ್‌ನಲ್ಲಿ ಕೆ.ಜಿ. ಭಾರದ ನಾಲ್ಕು ಕಲ್ಲುಗಳನ್ನು ತುಂಬಿ ಕಳಿಸಿರುವುದನ್ನು ಕಂಡು ಯುವಕ ಹೌಹಾರಿದ್ದಾನೆ.

ಪಾರ್ಸೆಲ್ ಬಾಕ್ಸ್‌ ಅನ್ನು ಮಾತ್ರ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿದ್ದು, ಕೊಂಚವೂ ಅನುಮಾನ ಬಾರದ ರೀತಿಯಲ್ಲಿ ಟೂಲ್ ಕಿಟ್‌ ಎಷ್ಟು ಭಾರ ಇರುತ್ತದೆಯೋ ಅಷ್ಟೇ ಭಾರದ ಕಲ್ಲುಗಳನ್ನು ಜೋಡಿಸಿ ಸರಿಯಾದ ವಿನ್ಯಾಸದೊಂದಿಗೆ ಡೆಲಿವರಿ ನೀಡಲಾಗಿತ್ತು.

ದಿಗ್ಭ್ರಾಂತನಾದ ಯುವಕ ಕಳೆದ 2 ತಿಂಗಳಿಂದ ಟೂಲ್ ಕಿಟ್ ವಾಪಸ್‌ಗಾಗಿ ಹಲವಾರು ಬಾರಿ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿದರೂ ಸಮರ್ಪಕವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ನೊಂದ ಯುವಕ ಗ್ರಾಹಕರ ನ್ಯಾಯಾಲಯದ ಕದ ತಟ್ಟಲು ಮುಂದಾಗಿದ್ದಾನೆ.