ಪಾಂಡವಪುರ ತಾಲೂಕಿನ ಕುಂತಿಬೆಟ್ಟದ ಬಯಲು ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ೧೦ ಲಕ್ಷ ರು. ಮೌಲ್ಯದ ೨೦ ಕೆಜಿ ೬೪೦ ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿರುವ ಟಾಟಾ ಇಂಡಿಗೋ ಕಾರನ್ನೂ ವಶಕ್ಕೆ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಪಾಂಡವಪುರ ತಾಲೂಕಿನ ಕುಂತಿಬೆಟ್ಟದ ಬಯಲು ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ೧೦ ಲಕ್ಷ ರು. ಮೌಲ್ಯದ ೨೦ ಕೆಜಿ ೬೪೦ ಗ್ರಾಂ ತೂಕದ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿರುವ ಟಾಟಾ ಇಂಡಿಗೋ ಕಾರನ್ನೂ ವಶಕ್ಕೆ ಪಡೆದಿದ್ದಾರೆ.ಮೈಸೂರಿನ ಹೆಬ್ಬಾಳ್ ಇಂಡಸ್ಟ್ರಿಯಲ್ ಏರಿಯಾ ನಿವಾಸಿ ಶ್ರೇಯಸ್‌ಗೌಡ (೨೦), ಪಾಂಡವಪುರ ಪಟ್ಟಣ ಮಾರಿಗುಡಿ ಬೀದಿಯ ಶಶಿಕುಮಾರ್ (೩೪), ವಿನೋದ ಅಲಿಯಾಸ್ ಮಾಡು (೪೧) ಬಂಧಿತ ಆರೋಪಿಗಳು. ಪಾಂಡವಪುರ ತಾಲೂಕು ಬೀರಶೆಟ್ಟಹಳ್ಳಿಯ ಕಾರು ಚಾಲಕ ಮಂಜುನಾಥ, ಶಾಂತಿನಗರದ ಅರುಣ್‌ಕುಮಾರ್ ಅಲಿಯಾಸ್ ಗಾಂಜಾ ಅರುಣ (೪೧), ವಿಜಯ್‌ಕುಮಾರ್ ಅಲಿಯಾಸ್ ವಿಜಿ ಎಂಬುವರು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳು ಈ ಗಾಂಜಾವನ್ನು ಒರಿಸ್ಸಾ ರಾಜ್ಯದ ಕೆಸ್ಸಿಂಗಾ ಎಂಬಲ್ಲಿಗೆ ಹೋಗಿ ಅಲ್ಲಿಂದ ಖರೀದಿ ಮಾಡಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಂದಿದ್ದರೆಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಆರೋಪಿಗಳು ಕೆಲ ದಿನಗಳ ಹಿಂದೆ ಬೆಳಗ್ಗೆ ೧೦.೩೦ರ ಸಮಯದಲ್ಲಿ ಪಾಂಡವಪುರ ತಾಲೂಕಿನ ಕುಂತಿಬೆಟ್ಟದ ಬಳಿಯ ಬಯಲು ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು ಟಾಟಾ ಇಂಡಿಗೋ ಕಾರಿ (ಕೆಎ-೪೧, ಎನ್-೬೨೫೮)ನಲ್ಲಿ ಅಕ್ರಮವಾಗಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಬರುವರೆಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ. ಶೋಭಾರಾಣಿ ಆದೇಶದ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ ಹಾಗೂ ಶ್ರೀರಂಗಪಟ್ಟಣ ಉಪವಿಭಾಗದ ಆರಕ್ಷಕ ಉಪಾಧೀಕ್ಷಕ ಯು.ಡಿ.ಕೃಷ್ಣಕುಮಾರ್ ಮಾರ್ಗದರ್ಶನದಲ್ಲಿ ಪಾಂಡವಪುರ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಪಿ.ಶರತ್‌ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಮಾರಾಟಕ್ಕೆ ಬಂದಿದ್ದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾದರು ಎನ್ನಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇತ್ತೀಚೆಗಷ್ಟೇ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಅಪ್ರಾಪ್ತ ಬಾಲಕರು ಗಾಂಜಾ, ಅಫೀಮು ಸೇವಿಸುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿರುವ ಬಗ್ಗೆ ಪೊಲೀಸರ ಬೇಜವಾಬ್ದಾರಿತನ, ಕರ್ತವ್ಯಲೋಪವನ್ನು ಕಠಿಣ ಶಬ್ಧಗಳಿಂದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಹರಿಹಾಯ್ದಿದ್ದರು. ಉಪಲೋಕಾಯುಕ್ತರು ಬೀಸಿದ ಚಾಟಿಯಿಂದ ಎಚ್ಚೆತ್ತಿರುವಂತೆ ಕಂಡುಬಂದಿರುವ ಪೊಲೀಸರು ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ.