ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದಶಕಗಳ ಹಿಂದೆ ಬಳ್ಳಾರಿ ಗಣಿನಾಡಿನಲ್ಲಿ ಗಣಿಗಳು ಬಾಗಿಲು ಮುಚ್ಚಿದ ಬಳಿಕ ಹಣ ಸಂಪಾದನೆಗೆ ಸರಗಳ್ಳತನಕ್ಕಿಳಿದು ಕುಖ್ಯಾತನಾಗಿದ್ದವನೊಬ್ಬ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಕೋಳಿವಾಡ ಗ್ರಾಮದ ವಿಶ್ವನಾಥ್ ಅಲಿಯಾಸ್ ಗಣಿ ಬಂಧಿತನಾಗಿದ್ದು, ಆರೋಪಿಯಿಂದ 310 ಗ್ರಾಂ ಚಿನ್ನಾಭರಣ ಹಾಗೂ 2 ಬೈಕ್‌ಗಳು ಜಪ್ತಿಯಾಗಿವೆ.
ಕೆಲ ದಿನಗಳ ಹಿಂದೆ ಬನಶಂಕರಿ 3ನೇ ಹಂತದಲ್ಲಿ ಮನೆಯೊಂದಕ್ಕೆ ಪರಿಚಿತನ ಸೋಗಿನಲ್ಲಿ ತೆರಳಿ ಗೃಹಿಣಿಯಿಂದ ಸರ ದೋಚಿ ಕಿಡಿಗೇಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆಗಿಳಿದ ಗಿರಿನಗರ ಪೊಲೀಸರು, ಬೆಂಗಳೂರಿನಲ್ಲಿ ಸರಗಳ್ಳತನ ಎಸಗಿದ ಬಳಿಕ ತೆಲಂಗಾಣ ರಾಜ್ಯದ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ವಿಶ್ವನಾಥ್‌ನನ್ನು ಬಾಡಿ ವಾರೆಂಟ್ ಮೇರೆಗೆ ವಶಕ್ಕೆ ಪಡೆದರು. ಬಳಿಕ ನಗರಕ್ಕೆ ತಂದು ವಿಚಾರಣೆಗೆ ಒಳಪಡಿಸಿದಾಗ ಆತನ ಸರಗಳ್ಳತನಗಳು ಬಯಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.70 ಲಾರಿಗಳ ಒಡೆಯನಾಗಿದ್ದ:
ಹಾವೇರಿ ಜಿಲ್ಲೆಯ ವಿಶ್ವನಾಥ್ ಯೌವನದಲ್ಲೇ ಶ್ರೀಮಂತಿಕೆ ಕಂಡವನು. ದಶಕಗಳ ಹಿಂದೆ ಬಳ್ಳಾರಿ ಸೀಮೆಯ ಪ್ರಭಾವಿ ರಾಜಕಾರಣಿಯೊಬ್ಬರ ಹಿಂಬಾಲಕನಾಗಿದ್ದ ಆತ, ಆ ನಾಯಕನ ದೆಸೆಯಿಂದ ಬಳ್ಳಾರಿ ಗಣಿಗಳಿಂದ ಆದಿರು ಸಾಗಾಣಿಕೆಯ ಗುತ್ತಿಗೆ ಪಡೆದಿದ್ದ. ಇದಕ್ಕಾಗಿ 70 ಲಾರಿಗಳನ್ನು ಆದಿರು ಸಾಗಾಣಿಕೆಗೆ ವಿಶ್ವನಾಥ್ ಹೊಂದಿದ್ದ. ಆದರೆ ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ವರದಿ ಮಂಡನೆ ಬಳಿಕ ಗಣಿಧೂಳು ಸದ್ದಡಗಿತು. ಆಗ ವಿಶ್ವನಾಥ್ ಬದುಕು ದುಸ್ತರವಾಯಿತು.ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಿದ್ದ ವಿಶ್ವನಾಥ್ ರಾತ್ರೋರಾತ್ರಿ ಧರೆಗೆ ಕುಸಿದು ಬಿದ್ದಿದ್ದ. ಸಾಲ ತೀರಿಸಲು ಒಂದೊಂದಾಗಿ ಲಾರಿಗಳನ್ನು ಮಾರಾಟ ಮಾಡಿದ. ಆಗಲೇ ದುಶ್ಟಟಗಳಿಗೆ ದಾಸನಾದ ವಿಶ್ವನ ಬದುಕು ಮೂರಾ ಬಟ್ಟೆಯಾಯಿತು. ಬೆವರು ಹರಿಸಿ ದುಡಿದು ತಿನ್ನುವುದನ್ನು ಬಿಟ್ಟು ಅಡ್ಡದಾರಿ ತುಳಿದ. ಈತನ ವರ್ತನೆಯಿಂದ ಬೇಸತ್ತು ಆತನ ಪತ್ನಿ ದೂರವಾದಳು. ಸರಗಳ್ಳತನಕ್ಕೆ ಅಂತಾರಾಜ್ಯ ಮಟ್ಟದಲ್ಲಿ ಕುಖ್ಯಾತಿ ಪಡೆದ ವಿಶ್ವನ ವಿರುದ್ಧ ಬೆಂಗಳೂರು ಸೇರಿದಂತೆ ರಾಜ್ಯ-ಹೊರ ರಾಜ್ಯಗಳಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಆತ ಜೈಲೂಟ ಸವಿದಿದ್ದಾನೆ. ಹೀಗಿದ್ದರೂ ಆತ ಬದಲಾಗದೆ ಮತ್ತೆ ತನ್ನ ದುಷ್ಕೃತ್ಯಗಳನ್ನು ಮುಂದುವರೆಸಿದ್ದ. ಈಗ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದು ಪರಪ್ಪನ ಕೇಂದ್ರ ಕಾರಾಗೃಹ ಸೇರಿದ್ದಾನೆ.ರಾಯರ ಭಕ್ತ ವಿಶ್ವ
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ಸರಗಳ್ಳ ವಿಶ್ವನಾಥ್. ಸರಗಳ್ಳತನ ಕೃತ್ಯ ಎಸಗಿದ ಬಳಿಕ ಮಾಂಗಲ್ಯವನ್ನು ದೇವಾಲಯದ ಹುಂಡಿಗೆ ಆತ ಹಾಕುತ್ತಿದ್ದ. ಇನ್ನುಳಿದ ಸರವನ್ನು ಮಾರಾಟ ಮಾಡಿ ಹಣ ಪಡೆದು ವಿಶ್ವ ಮಜಾ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.