ಶಾಸಕರ ಭವನ ಕಿಲಾರೆ ಕೆಫೆ ಮಾಲೀಕ ಆತ್ಮಹತ್ಯೆ

| Published : Oct 17 2024, 12:47 AM IST

ಸಾರಾಂಶ

ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ಹೋಟೆಲ್ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡು ಹೋಟೆಲ್ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಾಜಿನಗರ 2ನೇ ಹಂತದ ನಿವಾಸಿ ತಿಮ್ಮಣ್ಣ ಭಟ್‌ (40) ಮೃತ ದುರ್ದೈವಿ. ಮನೆಯಲ್ಲಿ ಮಂಗಳವಾರ ರಾತ್ರಿ ಊಟ ಮುಗಿಸಿದ ಬಳಿಕ ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ತಿಮ್ಮಣ್ಣ ಮಾಡಿಕೊಂಡಿದ್ದಾರೆ. ಮೃತರ ಕೋಣೆಗೆ ಬುಧವಾರ ಬೆಳಗ್ಗೆ 7.30ಕ್ಕೆ ಅವರ ಕಾರು ಚಾಲಕ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಸಾಲ್ಕೊಂಡು ಗ್ರಾಮದ ತಿಮ್ಮಣ್ಣ ಭಟ್‌, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಕಳೆದ 9 ವರ್ಷಗಳಿಂದ ಶಾಸಕರ ಭವನದಲ್ಲಿ ಕಿಲಾರೆ ಕೆಫೆ ಹೆಸರಿನಲ್ಲಿ ಹೋಟೆಲ್‌ ನಡೆಸುತ್ತಿದ್ದ ಅವರು, ಆರ್‌ಸಿ ಕಾಲೇಜು ಹಾಗೂ ಉದ್ಯೋಗ ಸೌಧದಲ್ಲಿ ಕೂಡ ಕ್ಯಾಂಟೀನ್ ಕೂಡ ಹೊಂದಿದ್ದರು. ತಮ್ಮ ಹೋಟೆಲ್ ಉದ್ಯಮವನ್ನು ವಿಸ್ತರಿಸಲು ಮುಂದಾಗಿದ್ದ ತಿಮ್ಮಣ್ಣ, ಎರಡು ವರ್ಷಗಳ ಹಿಂದೆ ತಮ್ಮ ಸ್ನೇಹಿತರ ಪಾಲುದಾರಿಕೆಯಲ್ಲಿ ಕುಮಟಾ ಹಾಗೂ ಮುರುಡೇಶ್ವರದಲ್ಲಿ ಹೋಟೆಲ್‌ಗಳನ್ನು ಆರಂಭಿಸಿದ್ದರು. ಆದರೆ ಈ ಹೋಟೆಲ್‌ಗಳಲ್ಲಿ ನಿರೀಕ್ಷಿತ ಆದಾಯ ಬಾರದೆ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ತಮ್ಮ ಸ್ನೇಹಿತರು ಸೇರಿದಂತೆ ಕೆಲವೆಡೆ ಲಕ್ಷಾಂತರು ರುಪಾಯಿ ಸಾಲ ಮಾಡಿ ಹೋಟೆಲ್ ಉದ್ಯಮಕ್ಕೆ ಅವರು ಹೂಡಿಕೆ ಮಾಡಿದ್ದರು. ಹೀಗಾಗಿ ಉದ್ಯಮದಲ್ಲಿ ಕೈ ಸುಟ್ಟುಕೊಂಡು ತೊಂದರೆಗೆ ಸಿಲುಕಿದ್ದರು.

ಎಂದಿನಂತೆ ಮನೆಗೆ ಬೆಳಗ್ಗೆ 7.30ಕ್ಕೆ ಅವರನ್ನು ಕರೆದೊಯ್ಯಲು ಕಾರು ಚಾಲಕ ಬಂದಿದ್ದಾರೆ. ಆದರೆ ಕೋಣೆ ಬಾಗಿಲು ಬಂದ್ ಆಗಿತ್ತು. ಆಗ ರೂಮ್ ಬಾಗಿಲು ಬಡಿದಾಗಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಮೃತರ ಪತ್ನಿಗೆ ಚಾಲಕ ವಿಷಯ ತಿಳಿಸಿದ್ದಾನೆ. ತರುವಾಯ ಚಾಲಕನ ನೆರವು ಪಡೆದು ತಿಮ್ಮಣ್ಣ ಅವರ ಕೋಣೆ ಬಾಗಿಲನ್ನು ಒಡೆದು ಕುಟುಂಬ ಸದಸ್ಯರು ಒಳ ಪ್ರವೇಶಿಸಿದಾಗ ನೇಣಿನ ಕುಣಿಕೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ನೇಹಿತರು, ಕುಟಂಬದ ಬಳಿ ತಮ್ಮಣ್ಣ ಕಣ್ಣೀರು

ಈ ಸಾಲ ಸಮಸ್ಯೆಯಿಂದ ಹೊರಲು ತೀವ್ರ ಪ್ರಯತ್ನಿಸಿದ್ದ ಅವರು, ಇತ್ತೀಚೆಗೆ ಇದೇ ಯಾತನೆಯಲ್ಲಿ ಖಿನ್ನತೆಗೊಳಾಗಿದ್ದರು. ತಮ್ಮ ಕಷ್ಟವನ್ನು ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಮುಂದೆ ಹೇಳಿಕೊಂಡು ಅವರು ಕಣ್ಣೀರಿಟ್ಟಿದ್ದರು. ಆಗೆಲ್ಲ ಸಮಸ್ಯೆ ಧೈರ್ಯವಾಗಿ ಎದುರಿಸೋಣ ಎಂದು ಅವರಿಗೆ ಕುಟುಂಬದವರು ಆತ್ಮವಿಶ್ವಾಸ ತುಂಬಿದ್ದರು. ಆದರೆ ಆ ಮಾತುಗಳು ಅವರಿಗೆ ಕೇಳಿಸದೆ ಹೋದವು. ಅಂತೆಯೇ ಮಂಗಳವಾರ ರಾತ್ರಿ ಸಹ ಪತ್ನಿ ಹಾಗೂ ಮಕ್ಕಳ ಜತೆ ಊಟ ಮಾಡುವಾಗಲೂ ಹಣಕಾಸು ವಿಚಾರ ಪ್ರಸ್ತಾಪವಾಗಿ ತಿಮ್ಮಣ್ಣ ನೊಂದು ಮಾತನಾಡಿದ್ದರು. ಆಗಲೂ ಅವರಿಗೆ ಪತ್ನಿ ಆಶಾ ಧೈರ್ಯ ಹೇಳಿದ್ದರು. ಆದರೆ ಇದೇ ನೋವಿನಲ್ಲಿ ಮಲಗಲು ತಮ್ಮ ಕೋಣೆಗೆ ತೆರಳಿದ ಅವರು ಬಳಿಕ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾರೆ. ಮಹಡಿಯ ಕೋಣೆಯಲ್ಲಿ ಅವರ ಪತ್ನಿ ಹಾಗೂ ಮಕ್ಕಳು ಮಲಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.