ಸಾರಾಂಶ
ಬೆಂಗಳೂರು ದಕ್ಷಿಣ : ಬೇಕರಿ ಮಾಲೀಕ ಕೊಟ್ಟ ಸಿಗರೇಟ್‌ಗೆ ಹಣ ಕೇಳಿದ್ದಕ್ಕೆ ಗಾಂಜಾ ಮತ್ತಿನಲ್ಲಿದ್ದ ಕಿಡಿಗೇಡಿಗಳು ಬೇಕರಿ ಧ್ವಂಸ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾನುಭೋಗನಹಳ್ಳಿ ಗ್ರಾಮದ ಶ್ರೀ ಕೃಷ್ಣ ಬೇಕರಿ ಅಂಡ್ ಕಾಂಡಿಮೆಂಟ್ಸ್ ನಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಘಟನೆ ನಡೆದಿದ್ದು, ಗಾಂಜಾ ಮತ್ತಿನಲ್ಲಿ ಇದ್ದ ಅದೇ ಗ್ರಾಮದ ಹರೀಶ್ ಹಾಗೂ ಆತನ ಮೂವರು ಸ್ನೇಹಿತರು ಬೆಳಿಗ್ಗೆ ಬೇಕರಿಗೆ ಬಂದಿದ್ದಾರೆ.
ಬೇಕರಿ ಮಾಲೀಕ ಬೈಂದೂರು ತಾಲೂಕಿನ ಕೆರಾಡಿ ಗ್ರಾಮದ ನಾರಾಯಣ ಶೆಟ್ಟಿಯವರಿಗೆ ಹರೀಶ್ ಸಿಗರೇಟ್ ಕೇಳಿದ್ದಾನೆ, ಆಗ 120 ರು. ಹಣ ಕೊಡುವಂತೆ ಬೇಕರಿ ಮಾಲಿಕ ನಾರಾಯಣ ಶೆಟ್ಟಿ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಕಿಡಿಗೇಡಿ ಹರೀಶ್ ಸ್ನೇಹಿತರೊಂದಿಗೆ ಏಕಾಏಕಿ ಬೇಕರಿ ಮುಂಭಾಗದ ಶೋಕೇಸ್ ಒಡೆದು ಹಾಕಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಬೇಕರಿ ಒಳಗೆ ನುಗ್ಗಿ ಒಳಗಿದ್ದ ವಸ್ತುಗಳನ್ನೆಲ್ಲ ಬಿಸಾಡಿ ಗ್ಲಾಸುಗಳನ್ನು ಹೊಡೆದು ಹಾಕಿ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.
ಸದಾ ಗಾಂಜಾ ಮತ್ತಿನಲ್ಲೇ ಇರುವ ಹರೀಶ್ ಈ ಹಿಂದೆಯೂ ಬೇಕರಿಗೆ ಬಂದು ಸಿಗರೇಟ್ ತೆಗೆದುಕೊಂಡು ಹಣ ಕೊಡದೆ ಹೋಗುತ್ತಿದ್ದ. ನನ್ನನ್ನೇ ಹಣ ಕೇಳುತ್ತೀಯಾ ಎಂದು ಪದೇಪದೇ ಬೇಕರಿ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಸೋಮವಾರ ಬೆಳಗ್ಗೆಯೂ ಸ್ನೇಹಿತರೊಂದಿಗೆ ಬಂದಿದ್ದ ಆತ ನಾನ್ಯಾರು ಗೊತ್ತಾ ನನ್ನನ್ನೇ ಹಣ ಕೇಳುವಷ್ಟು ಧೈರ್ಯವ ನಿನಗೆ ಎಂದು ಬೆದರಿಸಿದ್ದನು.
ಕಿಡಿಗೇಡಿಗಳ ಕೃತ್ಯದಿಂದ ಬೆಲೆಬಾಳುವ ಶೋಕೇಸ್ ಸಂಪೂರ್ಣ ಪುಡಿಯಾಗಿದ್ದು ಮಾಲೀಕ ನಾರಾಯಣ ಶೆಟ್ಟಿ ಬನ್ನೇರುಘಟ್ಟ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿ ತಲೆಮೆರೆಸಿಕೊಂಡಿರುವ ಆರೋಪಿ ಹರೀಶ್ ಹಾಗೂ ಆತನ ಸ್ನೇಹಿತರ ಬಂಧನಕ್ಕೆ ಬಲೆ ಬೀಸಿದ್ದಾರೆ.
ವಿಷಯ ತಿಳಿದ ಕರ್ನಾಟಕ ರಾಜ್ಯ ಬೇಕರಿ ಮತ್ತು ಕಾಂಡಿಮೆಂಟ್ಸ್ ಸಣ್ಣ ಉದ್ದಿಮೆದಾರರ ಒಕ್ಕೂಟದ ಅಧ್ಯಕ್ಷ ಪ್ರತಾಪ್ ಶೆಟ್ಟಿ ಅವರು ಶಾನುಭೋಗನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಬಳಿಕ ನಾರಾಯಣ ಶೆಟ್ಟಿ ಅವರ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್ ರವರಿಗೆ ದೂರು ನೀಡಿ ಆರೋಪಿಯನ್ನು ಬಂಧಿಸಿ ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಮುಂದೆ ಯಾವುದೇ ತೊಂದರೆ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.