ಸಾರಾಂಶ
ಮದ್ಯ ಸೇವಿಸಿದಾಗ ಒಂದೇ ಕೋಣೆಯಲ್ಲಿದ್ದ ಒಂದೇ ಊರಿನ ಇಬ್ಬರು ಗೆಳೆಯರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಹೊಸೂರು ರಸ್ತೆ ಕೆ.ಎಸ್.ಆರ್.ಟಿ.ಸಿ ಕಾಲೋನಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಆನೇಕಲ್ಮದ್ಯ ಸೇವಿಸಿದಾಗ ಒಂದೇ ಕೋಣೆಯಲ್ಲಿದ್ದ ಒಂದೇ ಊರಿನ ಇಬ್ಬರು ಗೆಳೆಯರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಹೊಸೂರು ರಸ್ತೆ ಕೆ.ಎಸ್.ಆರ್.ಟಿ.ಸಿ ಕಾಲೋನಿಯಲ್ಲಿ ನಡೆದಿದೆ.
ಬಿಹಾರ ಮೂಲದ ಸುರೇಶ(25) ಮೃತ ವ್ಯಕ್ತಿ. ಅದೇ ಊರಿನ ಮುನ್ನಾ(21) ಕೊಲೆ ಮಾಡಿದ ಆರೋಪಿ.ಬಿಹಾರ ಮೂಲದವರಾದ ಇಬ್ಬರೂ ಗಾರೆ ಕೆಲಸ ಮಾಡಿಕೊಂಡು ಒಂದೂವರೆ ತಿಂಗಳಿನಿಂದ ಒಂದೇ ಮನೆಯಲ್ಲಿ ವಾಸವಾಗಿದ್ದರು.ನಿತ್ಯವೂ ಸಂಜೆಯಾದರೆ ಮದ್ಯ ಸೇವನೆ ಮಾಡಿ ಮೇಲೆ ಗಾಂಜಾ ಹೊಡೆದು ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದರು.ಭಾನುವಾರ ರಾತ್ರಿಯೂ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಬಡಿದಾಡಿಕೊಂಡಿದ್ದಾರೆ. ನೆರೆಹೊರೆಯವರು ಗಲಾಟೆ ಬಿಡಿಸಲು ಪ್ರಯತ್ನಿಸಿ ಸಾಧ್ಯವಾಗದೆ ಮನೆ ಮಾಲೀಕನಿಗೆ ತಿಳಿಸಿದರು. ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲದ ಕಾರಣ ಆನೇಕಲ್ ಪೊಲೀಸರಿಗೆ ಕರೆ ಮಾಡಿ ಕರೆಸಿದಾಗ ಇಬ್ಬರಿಗೂ ಬೈದು ಬುದ್ಧಿ ಹೇಳಿ ಹೊರಟರು. ಮತ್ತೆ ಎರಡನೇ ಸುತ್ತಿನ ಜಗಳ ಪ್ರಾರಂಭವಾಗಿ ತಾರಕಕ್ಕೆ ಏರಿದಾಗ ಮುನ್ನಾ ಗಾಂಜಾ ನಶೆಯಲ್ಲಿ ಸುರೇಶನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದಾಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನೆರೆ ಮನೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಮುನ್ನಾನನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.