ಲಗೇಜ್‌ನೊಳಗೆ ಬಾಂಬ್‌ ಇದೆ ಎಂದ ಪ್ರಯಾಣಿಕನ ಬಂಧನ

| Published : Jan 31 2024, 02:17 AM IST / Updated: Jan 31 2024, 12:07 PM IST

KI Airport
ಲಗೇಜ್‌ನೊಳಗೆ ಬಾಂಬ್‌ ಇದೆ ಎಂದ ಪ್ರಯಾಣಿಕನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತಪಾಸಣೆ ತಡವಾಗಿದ್ದಕ್ಕೆ ಕೋಪಗೊಂಡು ಬ್ಯಾಗಲ್ಲಿ ಬಾಂಬ್‌ ಇದೆ ಎಂದು ಬೆದರಿಕೆ ಹಾಕಿದ ಪ್ರಯಾಣಿಕನನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದ ಟರ್ಮಿನಲ್‌-2ರಲ್ಲಿ ಲಗೇಜ್‌ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದು ಹೇಳಿ ಪ್ರಯಾಣಿಕನೊಬ್ಬ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಜ.28ರಂದು ಸಂಜೆ 7.28ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಐಎ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಸಹಾಯಕ ವ್ಯವಸ್ಥಾಪಕ ಯು.ಗಣೇಶ್‌ ನೀಡಿದ ದೂರಿನ ಮೇರೆಗೆ ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಠಾಣೆ ಪೊಲೀಸರು ಕೇರಳ ಮೂಲದ ಸಜು ಕೆ.ಕುಮಾರನ್‌(32) ಎಂಬಾನನ್ನು ಬಂಧಿಸಿ ಹೇಳಿಕೆ ದಾಖಲಿಸಿ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಏನಿದು ಘಟನೆ?
ಕೇರಳ ಮೂಲದ ಸಜು ಕೆ.ಕುಮಾರನ್‌ ನಗರದ ಪೀಣ್ಯ ಕೈಗಾರಿಕಾ ಪ್ರದೇಶದ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಜ.28ರಂದು ಸಂಜೆ ಕೆಐಎ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಪ್ರಯಾಣ ಬೆಳೆಸಲು ವಿಮಾನ ನಿಲ್ದಾಣದ ಟರ್ಮಿನಲ್‌-2ಕ್ಕೆ ಬಂದಿದ್ದಾನೆ. 

ಈ ವೇಳೆ ಭದ್ರತಾ ಸಿಬ್ಬಂದಿ ಆತನ ಲಗೇಜ್‌ ತಪಾಸಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಆತ ತಪಾಸಣೆಗೆ ಸರಿಯಾಗಿ ಸ್ಪಂದಿಸದೆ ಲಗೇಜ್‌ನಲ್ಲಿ ಬಾಂಬ್‌ ಇದೆ ಎಂದಿದ್ದಾನೆ.

ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಬ್ಯಾಗನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಯಾವುದೇ ಬಾಂಬ್‌ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಾಂಬ್‌ ಇದೆ ಎಂದು ಕೆಲ ಕಾಲ ಆತಂಕ ಸೃಷ್ಟಿಸಿದ್ದ ಸಜು ಕುಮಾರನ್‌ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೇರಳದಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸಜು ಕುಮಾರನ್‌ ತುರ್ತಾಗಿ ವಿಮಾನದಲ್ಲಿ ಕೊಚ್ಚಿಗೆ ಪ್ರಯಾಣ ಬೆಳೆಸಲು ಬಂದಿದ್ದ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಲಗೇಜ್‌ ತಪಾಸಣೆಗೆ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೋಪಗೊಂಡು ಬ್ಯಾಗ್‌ನಲ್ಲಿ ಬಾಂಬ್‌ ಇದೆ ಎಂದಿದ್ದಾಗಿ ಆತ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. 

ಆದರೂ ಸಾರ್ವಜನಿಕ ಸ್ಥಳದಲ್ಲಿ ಕಿಡಿಗೇಡಿತನ ಪ್ರದರ್ಶಿಸಿದ ಸಜು ಕುಮಾರನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗ್ಳೂರಿಂದ ಅಯೋಧ್ಯೆಗೆಸ್ಪೈಸ್‌ಜೆಟ್‌ ವಿಮಾನ ಸೇವೆನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯಾದ ನಂತರ ಯಾತ್ರಿಕರ ಆಗಮನ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದ 8 ನಗರಗಳಿಂದ ಅಯೋಧ್ಯೆಗೆ ವಿಮಾನ ಹಾರಾಟ ನಡೆಸುವುದಾಗಿ ತಿಳಿಸಿದೆ. 

ಫೆ.1ರಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉದ್ಘಾಟನೆ ನೆರವೇರಿಸಲಿದ್ದು, ಬೆಂಗಳೂರಿನಿಂದ ಫೆ.2ಕ್ಕೆ ಅಧಿಕೃತ ಸಂಚಾರ ಆರಂಭವಾಗಲಿದೆ.

ಅಯೋಧ್ಯೆಯಿಂದ ದೆಹಲಿ, ಚೆನ್ನೈ, ಅಹ್ಮದಾಬಾದ್‌, ಜೈಪುರ, ಪಟನಾ, ದರ್ಭಾಂಗ, ಮುಂಬೈ ಮತ್ತು ಬೆಂಗಳೂರು ನಗರಗಳಿಗೆ ಉಭಯ ಮಾರ್ಗಗಳಲ್ಲಿ ವಿಮಾನ ಹಾರಾಟ ನಡೆಸಲಿದೆ. 

ಪ್ರಮುಖವಾಗಿ ಬೆಂಗಳೂರು-ಅಯೋಧ್ಯೆ ನಡುವೆ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರಗಳಂದು ಹಾರಾಟ ನಡೆಸಲಿದೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಳಗ್ಗೆ 10:50ಕ್ಕೆ ಹೊರಟು ಅಯೋಧ್ಯೆಯ ಮರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 1:30ಕ್ಕೆ ತಲುಪಲಿದೆ.

ಮತ್ತೆ ಅಯೋಧ್ಯೆಯಿಂದ ಮಧ್ಯಾಹ್ನ 2:10ಕ್ಕೆ ಹೊರಟು ಬೆಂಗಳೂರಿಗೆ ಸಂಜೆ 4:45ಕ್ಕೆ ತಲುಪಲಿದೆ.ಇದಕ್ಕೂ ಮೊದಲು ಏರ್‌ಇಂಡಿಯಾ ಸಂಸ್ಥೆಯು ಬೆಂಗಳೂರಿನಿಂದ ಅಯೋಧ್ಯೆಗೆ ಜ.17ರಿಂದ ಪ್ರತಿನಿತ್ಯ ವಿಮಾನ ಹಾರಾಟ ಆರಂಭಿಸಿತ್ತು.