ಸೈಬರ್ ಅಪರಾಧ ಪತ್ತೆಗೆ ಪೊಲೀಸರಿಗೆ ತರಬೇತಿ: ಡಿಜಿಪಿ

| Published : Jan 26 2024, 01:48 AM IST

ಸಾರಾಂಶ

ಸೈಬರ್ ಅಪರಾಧ ಪತ್ತೆಗೆ ಪೊಲೀಸರಿಗೆ ತರಬೇತಿ: ಡಿಜಿಪಿ. ರಾಜ್ಯದ ಎಲ್ಲ ಪೊಲೀಸರನ್ನು ಸೈಬರ್‌ ಪ್ರಕರಣ ತನಿಖೆ ರೀತಿಯಲ್ಲಿ ಸಶಕ್ತಗೊಳಿಸಲಾಗುತ್ತದೆ: ಅಲೋಕ್‌ ಮೋಹನ್‌

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂದಿನ ಆರು ತಿಂಗಳ ಅವಧಿಯಲ್ಲಿ ಸಾಮಾನ್ಯ ಅಪರಾಧ ಕೃತ್ಯಗಳಷ್ಟೇ ಸಲೀಸಾಗಿ ಸೈಬರ್‌ ಪ್ರಕರಣಗಳ ತನಿಖೆ ನಡೆಸುವ ರೀತಿಯಲ್ಲಿ ರಾಜ್ಯದ ಎಲ್ಲ ಪೊಲೀಸರನ್ನು ಸಶಕ್ತಗೊಳಿಸಲಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್ ಹೇಳಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸುತ್ತ ಹೆಚ್ಚುತ್ತಿರುವ ಸೈಬರ್‌ ವಂಚನೆ ಹಾಗೂ ಮಾದಕ ವಸ್ತು ಮಾರಾಟ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು. ಸೈಬರ್ ಅಪರಾಧ ಸಂಬಂಧ ಸಿಇಎನ್‌ ಮಾತ್ರವಲ್ಲದೆ ಸ್ಥಳೀಯ ಠಾಣೆಗಳಲ್ಲಿ ಸಹ ದೂರು ದಾಖಲಿಸಬಹುದಾಗಿದೆ. ಸೈಬರ್ ಪ್ರಕರಣಗಳ ತನಿಖೆ ಕುರಿತು ಸಿಬ್ಬಂದಿಗೆ ನಿರಂತರವಾಗಿ ತರಬೇತಿ ನೀಡಲಾಗುತ್ತಿದ್ದು, ಇನ್ನು ಆರು ತಿಂಗಳಲ್ಲಿ ಸಾಮಾನ್ಯ ಅಪರಾಧ ಪ್ರಕರಣಗಳಷ್ಟೇ ಸಲೀಸಾಗಿ ಸೈಬರ್ ಕೃತ್ಯ ಬಗ್ಗೆ ಸಹ ತನಿಖೆ ನಡೆಸುವಂತೆ ಪೊಲೀಸರು ಸಶಕ್ತರಾಗಲಿದ್ದಾರೆ. ಈಗ ಸಿಇಎನ್‌ ಠಾಣೆಗಳಿಗೆ ಎಸಿಪಿ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಸೈಬರ್‌ ಕೃತ್ಯಗಳ ತನಿಖೆ ಸಂಬಂಧ ಸಿಐಡಿ ಸೈಬರ್‌ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳು ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ. ಪೊಲೀಸರನ್ನು ಟ್ರಾಫಿಕ್‌, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸೈಬರ್‌ ಎಂದು ವಿಭಾಗಿಸಿ ನೋಡುವಂತಿಲ್ಲ. ಅಗತ್ಯಬಿದ್ದರೆ ಎಲ್ಲೆಡೆ ಸಹ ಪೊಲೀಸರು ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಡಿಜಿಪಿ ತಿಳಿಸಿದರು.

ಅಪರಾಧ ಪ್ರಕರಣಗಳಲ್ಲಿ ತನಿಖೆ ಗುಣಮಟ್ಟ ಸುಧಾರಣೆಗೆ ವೈಜ್ಞಾನಿಕ ಸಾಕ್ಷಾೃಧಾರಗಳ ಸಂಗ್ರಹಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. ನ್ಯಾಯಾಲಯಗಳಲ್ಲಿ ಪ್ರಕರಣಗಳ ಶಿಕ್ಷಾ ಪ್ರಮಾಣ ಹೆಚ್ಚಳಕ್ಕೆ ಕೂಡ ಗಮನಹರಿಸಿ ಕೆಲಸ ಮಾಡಲಾಗುತ್ತಿದೆ ಎಂದು ನುಡಿದರು.

ಆಯುಕ್ತ ಬಿ.ದಯಾನಂದ್‌, ಹೆಚ್ಚುವರಿ ಆಯುಕ್ತರಾದ ಸತೀಶ್ ಕುಮಾರ್‌, ರಮಣಗುಪ್ತ ಹಾಗೂ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್‌, ಎಸಿಪಿ ಮೇಲ್ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಐ ಆ್ಯಮ್ ಸುಪ್ರೀಂ...!

ಐ ಆ್ಯಮ್ ಸುಪ್ರೀಂ ಆಫ್‌ ದಿ ಡಿಪಾರ್ಟ್‌ಮೆಂಟ್‌. ನಾನು ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವನಲ್ಲ..!

ಹೀಗೆ ಮೇಲಿಂದ ಮೇಲೆ ಬೆಂಗಳೂರು ನಗರ ಪೊಲೀಸರ ಸಭೆ ನಡೆಸುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಡಿಜಿಪಿ ಅಲೋಕ್ ಮೋಹನ್‌ ಉತ್ತರಿಸಿದ ಪರಿ.

ನಗರ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದೇಯೇ ಅಥವಾ ಅಧಿಕಾರಿಗಳ ಮೇಲೆ ನಿಮಗೆ ವಿಶ್ವಾಸವಿಲ್ಲವೇ ಎಂಬ ಪ್ರಶ್ನೆಗೆ ಗರಂ ಆದ ಡಿಜಿಪಿ ಅ‍ವರು, ನೀವು ಕೇಳಿದ ಎರಡು ಪ್ರಶ್ನೆಗಳು ಸರಿಯಿಲ್ಲ. ಐ ಆ್ಯಮ್ ಸುಪ್ರೀಂ ಆಫ್ ದಿ ಡಿಪಾರ್ಟ್‌ಮೆಂಟ್‌. ನನಗೆ ಎಲ್ಲ ಘಟಕಗಳ ಮೇಲುಸ್ತುವಾರಿ ನೋಡುವ ಅಧಿಕಾರವಿದೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರೆ ಪೊಲೀಸರ ಸಭೆಯನ್ನು ಸಹ ಮಾಡಿದ್ದೇನೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವನಲ್ಲ. ಫೀಲ್ಡ್‌ಗೆ ಇಳಿದು ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಂಚಾರ ವ್ಯವಸ್ಥೆ ಸುಧಾರಣೆ

ಆರು ತಿಂಗಳ ಅ‍ವಧಿಯಲ್ಲಿ ನಗರ ಸಂಚಾರ ವ್ಯವಸ್ಥೆ ಸುಧಾರಣೆ ಕಂಡಿದ್ದು, ಮೊದಲಿನಂತೆ ಟ್ರಾಫಿಕ್ ಸಮಸ್ಯೆ ಕಂಡು ಬರುತ್ತಿಲ್ಲ. ಕೆಲವೆಡೆ ಕಾಮಗಾರಿ ಪರಿಣಾಮ ವಾಹನಗಳ ನಿಧಾನಗತಿ ಸಂಚಾರವಾಗಿದೆ ಎಂದು ಡಿಜಿಪಿ ಹೇಳಿದರು.ನಿಯಮಿತವಾಗಿ ಪೊಲೀಸ್ ಅಧಿಕಾರಿಗಳ ಪರಿಶೀಲನೆ ಸಭೆ ನಡೆಸುವ ಪರಿಣಾಮ ಆಡಳಿತದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ. ಜನರಿಗೆ ಸಹ ಅನುಕೂಲವಾಗಿದೆ.

-ಅಲೋಕ್ ಮೋಹನ್‌, ಡಿಜಿಪಿ