ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದ ವೇಳೆ ನಡೆದ ಗಲಾಟೆಯಲ್ಲಿ ಮೈ ಮೇಲೆ ಮದ್ಯ ಎರೆಚಿದ್ದಾನೆ. ಮತ್ತೆ ನಿಂದಿಸಿದ ಎಂದು ಗೆಳೆಯನಿಗೆ ಸ್ನೇಹಿತನೇ ಬೆಂಕಿ ಹಚ್ಚಿದ್ದಾನೆ. ಇದರಿಂದ ಶೇ.30ರಷ್ಟು ಸುಟ್ಟ ಗಾಯಗಳಾಗಿವೆ.

 ಆನೇಕಲ್

ಕುಡಿದ ನಶೆಯಲ್ಲಿ ಮಾತಿಗೆ ಮಾತು ಬೆಳೆದು ಕೈಯ್ಯಲ್ಲಿದ್ದ ಮದ್ಯವನ್ನು ಗೆಳೆಯನ ಮೇಲೆ ಸುರಿದು ಬೆಂಕಿ ಹಚ್ಚಿದ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಸಂಜಯ್ ಬಾರ್‌ನಲ್ಲಿ ನಡೆದಿದೆ.

ಸಮೀಪದ ಮುತ್ತಗಟ್ಟಿ ಗ್ರಾಮದ ನಿವಾಸಿ ನಾಗೇಶ ದಾಳಿಗೆ ಒಳಗಾದ ವ್ಯಕ್ತಿ. ಅದೇ ಊರಿನ ವೆಂಕಟಸ್ವಾಮಿ ಬೆಂಕಿ ಹಚ್ಚಿದವನು. ಸೋಮವಾರ ಮದ್ಯಾಹ್ನ ಮದ್ಯ ಸೇವಿಸಲು ಗೆಳೆಯರಾದ ನಾಗೇಶ್, ವೆಂಕಟಸ್ವಾಮಿ ಹಾಗೂ ಸುನೀಲ ಆನೇಕಲ್‌ನ ಸಂಜಯ್ ಬಾರ್‌ಗೆ ತೆರಳಿದ್ದರು. ಕ್ಷುಲ್ಲಕ ವಿಷಯಕ್ಕೆ ನಾಗೇಶ್ ಮತ್ತು ವೆಂಕಟಸ್ವಾಮಿ ನಡುವೆ ಕಿರಿಕ್ ನಡೆದಿದೆ.

ಕೋಪೋದ್ರಿಕ್ತನಾದ ವೆಂಕಟಸ್ವಾಮಿ ತಾನು ಕುಡಿಯುತ್ತಿದ್ದ ಮದ್ಯವನ್ನು ನಾಗೇಶ್ ಮೇಲೆ ಎರಚಿದ್ದಾನೆ. ಇದರಿಂದ ಕೆರಳಿದ ನಾಗೇಶ್ ಕೆಟ್ಟ ಪದಗಳಿಂದ ವೆಂಕಟಸ್ವಾಮಿಯನ್ನು ನಿಂದಿಸಿದ್ದಾನೆ. ವೆಂಕಟಸ್ವಾಮಿ ತಾನು ಸುರಿದಿದ್ದ ಮಧ್ಯದ ಮೇಲೆ ಬೆಂಕಿ ಕಡ್ಡಿ ಗೀರಿ ಎಸೆದ್ದಾನೆ. ಕ್ಷಣ ಮಾತ್ರದಲ್ಲಿ ಬೆಂಕಿ ನಾಗೇಶನ ದೇಹವನ್ನು ಆವರಿಸಿದೆ. ಅಕ್ಕಪಕ್ಕ ಇದ್ದವರು ಘಟನೆ ಕಂಡು ದೂರ ಸರಿದರು. ಕೂಡಲೇ ಬಾರ್‌ನ ಸಿಬ್ಬಂದಿ ಜಗಳ ಬಿಡಿಸಿ, ಬೆಂಕಿ ನಂದಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಗಾಯಾಳು ನಾಗೇಶನನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಪ್ರಾಣಾಪಾಯದಿಂದ ಪಾರಾಗಿದ್ದರೂ ಶೇಕಡಾ 30 ಸುತ್ತ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ವೆಂಕಟಸ್ವಾಮಿಯ ಪತ್ತೆಗೆ ತಂಡ ರಚಿಸಿದ್ದು, ಶೀಘ್ರ ಬಂಧಿಸುವುದಾಗಿ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ತಿಳಿಸಿದರು.