ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಬೆಂಗಳೂರು: ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್‌ ಕಾಯ್ದಿರಿಸಿದೆ. 

ಪ್ರಜ್ವಲ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿದೆ. 

ಇದರೊಂದಿಗೆ ಪ್ರಜ್ವಲ್‌ ವಿರುದ್ಧ ಎಸ್‌ಐಟಿ ವ್ಯಾಪ್ತಿಯಲ್ಲಿರುವ ಎಲ್ಲ ನಾಲ್ಕು ಪ್ರಕರಣಗಳ ಜಾಮೀನು ಆದೇಶ ಕಾಯ್ದಿರಿಸಿದಂತಾಗಿದೆ. ಒಂದೇ ಬಾರಿಗೆ ಆದೇಶ ಪ್ರಕಟಿಸುವುದಾಗಿಯೂ ನ್ಯಾಯಾಲಯ ಹೇಳಿದೆ. ಪ್ರಕರಣದಲ್ಲಿನ ವಿಚಾರಗಳು ಘೋರವಾಗಿವೆ ಎಂದು ನ್ಯಾಯಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟು ತೀರ್ಪು ಕಾಯ್ದಿರಿಸಿತು.

ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್‌ ಅವರು, ಈ ಪ್ರಕರಣದಲ್ಲಿ ದೂರುದಾರೆ ಪ್ರಜ್ವಲ್‌ ನಿಯಂತ್ರಣದಲ್ಲಿದ್ದರು. ಪ್ರಜ್ವಲ್‌ ಕುಟುಂಬ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಾಢ್ಯವಾದ ಕುಟುಂಬವಾಗಿದೆ. ಆಕೆಯನ್ನು ದೂರು ನೀಡದಂತೆ ಅಕ್ಷರಶಃ ಬೆದರಿಸಲಾಗಿದೆ. ಅಪಹರಣದ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವುದು ಇದೇ ಮಹಿಳೆಯೇ. ಲೋಕಸಭಾ ಚುನಾವಣೆಗೆ ಮತ್ತು ನಂತರ ಎರಡು ಬಾರಿ ಆಕೆಯನ್ನು ಅಪಹರಿಸಲಾಗಿದೆ. ಆಕೆಯ ಕುಟುಂಬ ಬೆಂಬಲ ನೀಡಿದ ನಂತರ ಅವರು ದೂರು ನೀಡಿದ್ದಾರೆ ಎಂದು ವಿವರಿಸಿದರು.

ಅಲ್ಲದೆ, ವಿಡಿಯೊದಲ್ಲಿ ಸಂತ್ರಸ್ತೆ ಪರಿಪರಿಯಾಗಿ ಅತ್ಯಾಚಾರ ಮಾಡದಂತೆ ಪ್ರಜ್ವಲ್‌ಗೆ ಕೋರಿದ್ದಾಳೆ. ಇದರ ಅರ್ಥ ಇದು ಸಮ್ಮತಿ ಎಂತಲೇ? ಆಕೆ ಪ್ರಜ್ವಲ್‌ಗಿಂತ ಎರಡು ಪಟ್ಟು ವಯಸ್ಸಿನಲ್ಲಿ ಹಿರಿಯಳಾಗಿದ್ದಾರೆ. ಇಂಥ ಮಹಿಳೆ ಪ್ರಜ್ವಲ್‌ ಕಾಲು ಹಿಡಿಯುತ್ತಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಪ್ರಜ್ವಲ್‌ ಚಿತ್ರ, ಧ್ವನಿ, ಮಾತುಗಳು ಹೊಂದಾಣಿಕೆಯಾಗಿವೆ. ಆರೋಪ ಪಟ್ಟಿಯಲ್ಲಿನ ಸಾಕಷ್ಟು ವಿಚಾರಗಳನ್ನು ಓದಲು ನನಗೆ ಕಷ್ಟವಾಗುತ್ತದೆ ಎಂದು ಎಂದು ಪ್ರೊ. ರವಿವರ್ಮ ಕುಮಾರ್‌ ವಿವರಿಸಿದರು.