ಸಾರಾಂಶ
ಪುಣೆ: ಪುಣೆಯಲ್ಲಿ ಭಾನುವಾರ ರಾತ್ರಿ ಶ್ರೀಮಂತ ಅಪ್ರಾಪ್ತನೊಬ್ಬ ಕುಡಿದು ವೇಗವಾಗಿ ಐಷಾರಾಮಿ ಪೋರ್ಷೆ ಕಾರು ಚಲಾಯಿಸಿ ನವದಂಪತಿಯ ಮರಣಕ್ಕೆ ಕಾರಣವಾಗಿದ್ದ. ಆದರೆ ಈ ಪೋರ್ಷೆ ಕಾರು ಖರೀದಿಸಿ 3 ತಿಂಗಳಾದರೂ ನೋಂದಣಿಯೇ ಆಗಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಈ ಕುರಿತು ಮಹಾರಾಷ್ಟ್ರ ಸಾರಿಗೆ ಆಯುಕ್ತ ವಿವೇಕ್ ಮಾಹಿತಿ ನೀಡಿದ್ದು, ‘ಬೆಂಗಳೂರು ಮೂಲದ ಡೀಲರ್ ಒಬ್ಬರಿಂದ ಮಾರ್ಚ್‌ನಲ್ಲಿ 2.5 ಕೋಟಿ ರು. ಮೌಲ್ಯದ ಎಲೆಕ್ಟ್ರಿಕ್ ಕಾರನ್ನು ಉದ್ಯಮಿ ಅಗರ್‌ವಾಲ್ ಆಮದು ಮಾಡಿಕೊಂಡಿದ್ದರು. ಬಳಿಕ ಅದನ್ನು ಪುಣೆಗೆ ತಂದಿದ್ದರೂ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕವಾಗಿರುವ ₹1,758 ಹಣ ಕಟ್ಟದ ಕಾರಣ ಮೂರು ತಿಂಗಳಿಂದ ನೋಂದಣಿ ಆಗದೆ ಹಾಗೆಯೇ ಬಾಕಿ ಉಳಿದಿದೆ’ ಎಂದು ತಿಳಿಸಿದ್ದಾರೆ.
2.5 ಕೋಟಿ ರು. ಕೊಟ್ಟು ಮಗನಿಗೆ ಕಾರು ಕೊಡಿಸಿದ ಉದ್ಯಮಿ ಅಗರ್‌ವಾಲ್, 1758 ರು. ನೀಡಿ ಕಾರು ನೋಂದಣಿ ಮಾಡಿಸಿಕೊಳ್ಳದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣದಲ್ಲಿ ವಾಹನ ಚಲಾಯಿಸುತ್ತಿದ್ದ ಬಾಲಕನಿಗೆ ಪ್ರಬಂಧ ಬರೆಯುವ ಷರತ್ತು ವಿಧಿಸಿ 15 ಗಂಟೆಗಳಲ್ಲೇ ಜಾಮೀನು ನೀಡಿದ ಕಾರಣ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಅಪ್ರಾಪ್ತ ಬಾಲಕ ಮದ್ಯ ಕುಡಿದ ಬಾರ್‌ನಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿ ಮತ್ತು ಬಾಲಕನ ತಂದೆಯನ್ನು ಬಂಧಿಸಲಾಗಿದೆ.