ಸುಳ್ಳು ಕೇಸ್‌ ಕೊಟ್ಟ ಇಬ್ಬರಿಗೆ ಶಿಕ್ಷೆ

| Published : Feb 19 2025, 01:16 AM IST

ಸುಳ್ಳು ಕೇಸ್‌ ಕೊಟ್ಟ ಇಬ್ಬರಿಗೆ ಶಿಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಠಾಣೆಗಳಿಗೆ ಅನಗತ್ಯವಾಗಿ ಸುಳ್ಳು ದೂರು ಸಲ್ಲಿಸಿದ ಆರು ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಇಬ್ಬರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಠಾಣೆಗಳಿಗೆ ಅನಗತ್ಯವಾಗಿ ಸುಳ್ಳು ದೂರು ಸಲ್ಲಿಸಿದ ಆರು ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಇಬ್ಬರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಸುಳ್ಳು ದೂರು ದಾಖಲಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಳ್ಳು ದೂರು ನೀಡಿದವರ ವಿರುದ್ಧ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಎರಡು ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ನ್ಯಾಯಾಲಯವು ಶಿಕ್ಷೆ ಘೋಷಿಸಿದೆ ಎಂದು ವಿವರಿಸಿದರು.

ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖಾ ಹಂತದಲ್ಲಿ ಸುಳ್ಳು ದೂರು ನೀಡಿರುವುದು ಗೊತ್ತಾಯಿತು. ಆಗ ದೂರುದಾರರ ವಿರುದ್ಧವೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ಕೊನೆಗೆ ನ್ಯಾಯಾಲಯದಲ್ಲಿ ಸುಳ್ಳು ದೂರು ನೀಡಿದ್ದನ್ನು ಆರೋಪಿ ತಪ್ಪೊಪ್ಪಿಕೊಂಡಿದ್ದು, ಆತನಿಗೆ ₹500 ದಂಡ ವಿಧಿಸಿದೆ. ಈ ದಂಡ ಪಾವತಿಸದೆ ಹೋದರೆ 5 ದಿನ ಸಾದಾ ಶಿಕ್ಷೆ ವಿಧಿಸಿದೆ ಎಂದು ತಿಳಿಸಿದರು.

ಅದೇ ರೀತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣದಲ್ಲಿ ಸಹ ಸುಳ್ಳು ದೂರು ನೀಡಿದ್ದು ಬಯಲಾಯಿತು. ಈ ಪ್ರಕರಣದ ದೂರುದಾರನಿಗೆ ₹100 ದಂಡ ಹಾಗೂ ದಂಡ ಪಾವತಿಸದೆ ಹೋದರೆ 5 ದಿನ ಸಾದಾ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ ಎಂದು ತಿಳಿಸಿದರು.