ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್‌ನ ಶೆಹಜಾದಾ ನಕ್ಸಲರ ಭಾಷೆ ಬಳಸುತ್ತಿದ್ದಾರೆ.

ಜೆಮ್ಷೆಡ್‌ಪುರ್‌ : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಕಾಂಗ್ರೆಸ್‌ನ ಶೆಹಜಾದಾ ನಕ್ಸಲರ ಭಾಷೆ ಬಳಸುತ್ತಿದ್ದಾರೆ. ಅವರ ಪಕ್ಷವು ಉದ್ಯಮಿಗಳನ್ನು ಸುಲಿಯಲು ಹೊಸ ಹೊಸ ಮಾರ್ಗಗಳನ್ನು ಬಳಸುತ್ತಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್‌ ಆಳ್ವಿಕೆಯ ರಾಜ್ಯಗಳಲ್ಲಿ ಹೂಡಿಕೆ ಮಾಡುವ ಮುನ್ನ ಉದ್ಯಮಿಗಳು 50 ಸಲ ಯೋಚನೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ಶೆಹಜಾದಾ ಬಳಸುತ್ತಿರುವ ನಕ್ಸಲರ ಭಾಷೆಯನ್ನು ನೋಡಿ ಉದ್ಯಮಿಗಳು ಕಾಂಗ್ರೆಸ್‌ ಆಳ್ವಿಕೆಯ ರಾಜ್ಯಗಳಲ್ಲಿ ಬಂಡವಾಳ ಹೂಡಿಕೆ ಮಾಡಲು 50 ಸಲ ಯೋಚನೆ ಮಾಡುವಂತಾಗಿದೆ. ಶೆಹಜಾದಾ ನಕ್ಸಲರ ಭಾಷೆ ಬಳಸಿ ಹೊಸ ಹೊಸ ವಿಧಾನಗಳ ಮೂಲಕ ಉದ್ಯಮಿಗಳನ್ನು ಸುಲಿಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಶನಿವಾರ ರಾಹುಲ್‌ ಗಾಂಧಿ ನವದೆಹಲಿಯಲ್ಲಿ ಮಾತನಾಡುವಾಗ, ‘ಮೋದಿ ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ. ಆಗ ಅವರಿಗೆ ಅದಾನಿ ಜೊತೆ ಏನು ಸಂಬಂಧ ಎಂದು ಕೇಳುತ್ತೇನೆ. ಕಾಂಗ್ರೆಸ್‌ಗೆ ಅದಾನಿ-ಅಂಬಾನಿಯಿಂದ ಟೆಂಪೋ ಲೋಡ್‌ಗಳಲ್ಲಿ ಹಣ ಬರುತ್ತಿದೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ ಅದರ ಬಗ್ಗೆ ತನಿಖೆ ಮಾಡಲು ಅವರಿಗೆ ಧೈರ್ಯವಿಲ್ಲ’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ‘ಶೆಹಜಾದಾ ನಕ್ಸಲರ ಭಾಷೆ ಬಳಸುತ್ತಿದ್ದಾರೆ. ಆದರೆ ನಾನು ನಕ್ಸಲರ ಬೆನ್ನು ಮೂಳೆ ಮುರಿದಿದ್ದೇನೆ. ಹೀಗಾಗಿ ಈಗ ಹಣ ಸುಲಿಯುವ ಕೆಲಸವನ್ನು ಕಾಂಗ್ರೆಸ್‌ ಮತ್ತು ಜೆಎಂಎಂ ಪಕ್ಷಗಳು ವಹಿಸಿಕೊಂಡಿವೆ. ಶೆಹಜಾದಾ ಆಡುವ ಉದ್ಯಮಿಗಳ ವಿರೋಧಿ ಮಾತನ್ನು ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿಗಳು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಹೇಳಬೇಕು’ ಎಂದು ಒತ್ತಾಯಿಸಿದರು.

ಲೋಕಸಭೆ ಸೀಟು ಇವರ ಆಸ್ತಿಯಲ್ಲ:

‘ಶೆಹಜಾದಾ ರಾಯ್‌ಬರೇಲಿಯಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸುವಾಗ ‘ಇದು ನನ್ನ ಮಮ್ಮಿಯ ಸೀಟು’ ಎಂದಿದ್ದಾರೆ. ಎಂಟು ವರ್ಷದ ಶಾಲಾ ಬಾಲಕನೂ ಹೀಗೆ ಹೇಳುವುದಿಲ್ಲ. ಅವರ ತಾಯಿ (ಸೋನಿಯಾ ಗಾಂಧಿ) ‘ನಾನು ನನ್ನ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುತ್ತಿದ್ದೇನೆ’ ಎನ್ನುತ್ತಾರೆ. ಕಾಂಗ್ರೆಸ್‌ ಪಕ್ಷ ಲೋಕಸಭಾ ಕ್ಷೇತ್ರಗಳನ್ನು ತಮ್ಮ ಆಸ್ತಿಯೆಂದು ಭಾವಿಸಿ ವಸೀಯತ್‌ನಾಮಾ (ವಿಲ್‌) ಬರೆಯುತ್ತಿದೆ’ ಎಂದೂ ಮೋದಿ ಕಿಡಿಕಾರಿದರು.