ಸಾರಾಂಶ
ಬೆಂಗಳೂರು : ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ರೈಲು ಗಾಡಿಗಳ ಸ್ವಚ್ಛತಾ ವಿಭಾಗದ ಇಬ್ಬರು ಹೊರಗುತ್ತಿಗೆ ನೌಕರರನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ದಳ ಅಧಿಕಾರಿಗಳು ಜಂಟಿಯಾಗಿ ಬಂಧಿಸಿದ್ದಾರೆ.
ಯಶವಂತಪುರ ರೈಲ್ವೆ ನಿಲ್ದಾಣದ ರೈಲುಗಳ ಸ್ವಚ್ಛತಾ ಸಿಬ್ಬಂದಿ ಸೈಯದ್ ಹಾಗೂ ವಿಜಯ್ ಬಂಧಿತರಾಗಿದ್ದು, ಆರೋಪಿಗಳಿಂದ 49 ಮೊಬೈಲ್‌ಗಳು, 3 ಟ್ಯಾಬ್‌ಗಳು, 153 ಗ್ರಾಂ ಚಿನ್ನಾಭರಣ, 825 ಬೆಳ್ಳಿ ಹಾಗೂ ₹1.5 ಲಕ್ಷ ನಗದು ಸೇರಿದಂತೆ ಒಟ್ಟು ₹21.68 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ರೈಲ್ವೆ ನಿಲ್ದಾಣದಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಸ್ವಚ್ಛತಾ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಕೃತ್ಯಗಳ ಬಯಲಾಗಿದೆ ಎಂದು ರಾಜ್ಯ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ। ಎಸ್.ಕೆ.ಸೌಮ್ಯಲತಾ ತಿಳಿಸಿದ್ದಾರೆ.
ರಾತ್ರಿ ವೇಳೆ ಪ್ರಯಾಣಿಕರ ವಸ್ತುಗಳು ಕಳವು:
ಕಳೆದ ಏಳೆಂಟು ವರ್ಷಗಳಿಂದ ಹೊರಗುತ್ತಿಗೆಯಲ್ಲಿ ರೈಲುಗಳ ಸ್ವಚ್ಥತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಹಾಗೂ ವಿಜಯ್, ಯಶವಂತಪುರ ರೈಲ್ವೆ ನಿಲ್ದಾಣ ಸಮೀಪದ ಡಾ। ಬಿ.ಆರ್.ಅಂಬೇಡ್ಕರ್ ನಗರದಲ್ಲಿ ನೆಲೆಸಿದ್ದರು. ರೈಲ್ವೆ ನಿಲ್ದಾಣಕ್ಕೆ ಮಧ್ಯ ರಾತ್ರಿ ಆಗಮಿಸುತ್ತಿದ್ದ ರೈಲುಗಳಲ್ಲೇ ಈ ಇಬ್ಬರು ಕಳ್ಳತನ ಮಾಡುತ್ತಿದ್ದರು. ಆದರೆ ಪ್ರಯಾಣಿಕರಿಂದ ಆರೋಪಿಗಳು ಬಲವಂತವಾಗಲಿ ಅಥವಾ ಚಲಿಸುವ ರೈಲುಗಳಿಗೆ ನುಗ್ಗಿ ಆರೋಪಗಳು ಕಳವು ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಬಳಿಕ ರೈಲಿನಿಂದಿಳಿಯದೆ ನಿದ್ರೆ ಮಾಡುತ್ತಿದ್ದ ಪ್ರಯಾಣಿಕರ ಬ್ಯಾಗ್, ರೈಲು ಇಳಿಯುವ ಅವಸರದಲ್ಲಿ ಮರೆತು ಹೋಗಿದ್ದ ಬ್ಯಾಗ್‌ಗಳಲ್ಲಿ ಆಭರಣ, ಹಣ ಹಾಗೂ ರೈಲುಗಳಲ್ಲಿ ಚಾರ್ಜಿಂಗ್ ಹಾಕಿ ಮರೆತು ಬಿಟ್ಟು ಹೋಗಿದ್ದ ಮೊಬೈಲ್‌ಗಳನ್ನು ಸೈಯದ್ ಹಾಗೂ ವಿಜಯ್ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಆರೋಪಿಗಳು ಈ ಕೃತ್ಯ ಎಸಗಿದ್ದರು. ರೈಲುಗಳ ಸ್ವಚ್ಛತೆಗೆ ರಾತ್ರಿ ಪಾಳಿಯದಲ್ಲೇ ಅವರು ಕೆಲಸ ಮಾಡುತ್ತಿದ್ದು, ಕಳ್ಳತನಕ್ಕೂ ಅನುಕೂಲವಾಗಿತ್ತು. ರೈಲುಗಳಲ್ಲಿ ಕಳ್ಳತನ ಬಗ್ಗೆ ವರದಿಯಾಗುತ್ತಿದ್ದವು. ಕೆಲ ದಿನಗಳ ಹಿಂದೆ ಪ್ರಯಾಣಿಕರೊಬ್ಬರ ಬ್ಯಾಗನ್ನು ಆರೋಪಿಗಳು ತೆಗೆದುಕೊಂಡು ಹೋಗುತ್ತಿದ್ದರು. ಆಗ ಅನುಮಾನದ ಬಂದು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ.
ಕದ್ದ ಮಾಲು ಮನೆಯಲ್ಲೇ ಇಟ್ಟಿದ್ದ ಆರೋಪಿಗಳು:
ರೈಲುಗಳಲ್ಲಿ ಕಳವು ಮಾಡಿದ್ದ ಮೊಬೈಲ್ ಹಾಗೂ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಮಾರಾಟ ಮಾಡದೆ ತಮ್ಮ ಮನೆಯಲ್ಲೇ ಆರೋಪಿಗಳು ಸಂಗ್ರಹಿಸಿಟ್ಟಿದ್ದರು. ಮಾರಾಟಕ್ಕೆ ಯತ್ನಿಸಿದ್ದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ಕಳವು ವಸ್ತುಗಳನ್ನು ತಮ್ಮಲ್ಲೇ ಆರೋಪಿಗಳು ಇಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.