ಪೊಲೀಸರ ಸೂಚನೆ ಉಲ್ಲಂಘಿಸಿ ಭಾನುವಾರ ಐಪಿಎಲ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಗೆಲುವನ್ನು ಸಾರ್ವಜನಿಕವಾಗಿ ಸಂಭ್ರಮಿಸಿದವರಿಗೆ ನಗರ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.
ಬೆಂಗಳೂರು : ಪೊಲೀಸರ ಸೂಚನೆ ಉಲ್ಲಂಘಿಸಿ ಭಾನುವಾರ ಐಪಿಎಲ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಗೆಲುವನ್ನು ಸಾರ್ವಜನಿಕವಾಗಿ ಸಂಭ್ರಮಿಸಿದವರಿಗೆ ನಗರ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.
ರಸ್ತೆಗಳಲ್ಲಿ ಜೋರಾಗಿ ಹಾರನ್ ಮಾಡುತ್ತ ಹಾಗೂ ಅಡ್ಡಾದಿಡ್ಡಿಯಾಗಿ ವಾಹನ ಓಡಿಸಿ ಕೆಲವರು ನಿಯಮ ಉಲ್ಲಂಘಿಸಿದ್ದರು. ಈ ಸಂಬಂಧ 83 ಬೈಕ್‌ಗಳು, 3 ಆಟೋ ಹಾಗೂ 1 ಕಾರು ಸೇರಿದಂತೆ 87 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ವಾಹನಗಳ ವಿರುದ್ಧ ಕ್ರಮ
ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದರೆ ಸಾರ್ವಜನಿಕವಾಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡದಂತೆ ತಿಳಿಸಿ ಪೊಲೀಸರು ನಿರ್ಬಂಧ ವಿಧಿಸಿದ್ದರು. ಹೀಗಿದ್ದರೂ ರಸ್ತೆಗಿಳಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಗಸ್ತು ನಡೆಸಿದ್ದ ಪೊಲೀಸರು ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಸನ್ ರೂಪ್ ತೆಗೆದು ಜೈಕಾರ:
ಎಂ.ಜಿ.ರಸ್ತೆಯಲ್ಲಿ ಕಾರಿನ ಸನ್ ರೂಪ್ ತೆಗೆದು ಕೂಗಿಕೊಳ್ಳುತ್ತ ಬರುತ್ತಿದ್ದವರು ಮಹಿಳಾ ಎಸಿಪಿ ‘ಬ್ಯಾಟನ್’ ಬೀಸಿದ ಕೂಡಲೇ ಭೀತಿಗೊಂಡು ಕಾರಿನೊಳಗೆ ತೂರಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಂ.ಜಿ.ರಸ್ತೆಯಲ್ಲಿ ಭಾನುವಾರ ರಾತ್ರಿ ಕಬ್ಬನ್ ಪಾರ್ಕ್ ಎಸಿಪಿ ಪ್ರಿಯದರ್ಶಿನಿ ಸಾಣಿಕೊಪ್ಪ ನೇತೃತ್ವದ ತಂಡ ಗಸ್ತು ನಡೆಸಿತ್ತು. ಅದೇ ವೇಳೆ ಆರ್‌ಸಿಬಿ ಅಭಿಮಾನಿಗಳಿದ್ದ ಕಾರು ಬಂದಿದೆ. ಆ ಕಾರಿನ ಸನ್ ರೂಪ್ ತೆರೆದು ಇಬ್ಬರು ಬಾಲಕಿಯರು ಆರ್‌ಸಿಬಿ ಜೈಕಾರ ಹಾಕುತ್ತ ಬರುತ್ತಿದ್ದರು. ಆ ಕಾರಿಗೆ ತಮ್ಮ ಬ್ಯಾಟನ್‌ನಿಂದ ಎಸಿಪಿ ಹೊಡೆದರು. ಆಗ ಗಾಬರಿಗೊಂಡು ಸನ್ ರೂಪ್‌ನಿಂದ ಕಾರಿನೊಳಗೆ ಬಾಲಕಿಯರು ಅವಿತುಕೊಂಡರು.