ಸಾರಾಂಶ
ಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ರೀಲ್ಸ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋನ ಇಬ್ಬರು ಮಾಜಿ ಸ್ಪರ್ಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಮತ್ತು ವಿನಯ್ ಗೌಡ ಬಂಧಿತರು. ಬಸವೇಶ್ವರನಗರ ಪೊಲೀಸ್ ಠಾಣೆಯ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಉಸ್ತುವಾರಿ ಪಿಎಸ್‌ಐ ಭಾನುಪ್ರಕಾಶ್ ನೀಡಿದ ದೂರಿನ ಮೇರೆಗೆ ಈ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಬಿಎನ್‌ಎಸ್ ಕಾಯ್ದೆ ವಿವಿಧ ಕಲಂಗಳ ಅಡಿ ಎಫ್ಐಆರ್ ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದರು. ಸೋಮವಾರ ಠಾಣೆಗೆ ಹಾಜರಾಗಿದ್ದ ಇಬ್ಬರನ್ನೂ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ ಪೊಲೀಸರು ಬಳಿಕ ಬಂಧಿಸಿದ್ದಾರೆ.
ಏನದು ಪ್ರಕರಣ?:
ಇನ್‌ಸ್ಟಾಗ್ರಾಮ್ ಆ್ಯಪ್‌ನ ಬುಜ್ಜಿ ಎಂಬ ಖಾತೆಯಲ್ಲಿ ರಜತ್ ಕಿಶನ್ ಮತ್ತು ವಿನಯ್ ಗೌಡ ಲಾಂಗ್ ಹಿಡಿದುಕೊಂಡು ಸಿನಿಮೀಯ ಶೈಲಿಯಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. 18 ಸೆಕೆಂಡ್‌ಗಳ ಈ ರೀಲ್ಸ್ ವಿಡಿಯೋದಲ್ಲಿ ಸಾರ್ವಜನಿಕ ಸ್ಥಳದಲ್ಲಿ ರೌಡಿಗಳ ಮಾದರಿಯಲ್ಲಿ ಇಬ್ಬರು ಲಾಂಗ್ ಹಿಡಿದು ಪೋಸ್ ನೀಡಿದ್ದಾರೆ. ಈ ಮುಖಾಂತರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟು ಮಾಡುವಂತೆ ಭಯ ಸೃಷ್ಟಿಸಿದ್ದಾರೆ.
ಹೀಗಾಗಿ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಿಎಸ್‌ಐ ಭಾನುಪ್ರಕಾಶ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಇಬ್ಬರ ವಿರುದ್ಧ ಬಸವೇಶ್ವರನಗರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ. ಸದ್ಯ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆರ್.ಆರ್.ನಗರ ಠಾಣೆಗೆ ಹೋಗಿದ್ದ ವಿನಯ್ ಗೌಡ
ಲಾಂಗ್ ಹಿಡಿದು ರೀಲ್ಸ್ ಮಾಡಿದ ಸಂಬಂಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ವಿನಯ್ ಗೌಡ ಮತ್ತು ರಜತ್ ಕಿಶನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ವಿನಯ್ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ತೆರಳಿ ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಲು ಹೋಗಿದ್ದಾರೆ. ಪ್ರಕರಣ ದಾಖಲಾಗಿರುವ ಠಾಣೆಗೆ ತೆರಳಿ ಸ್ಪಷ್ಟನೆ ನೀಡುವಂತೆ ಆರ್.ಆರ್.ನಗರ ಪೊಲಿಸರು ವಿನಯ್ ಗೌಡಗೆ ಹೇಳಿ ಕಳುಹಿಸಿದ್ದಾರೆ. ವಿನಯ್ ಗೌಡ ಅವರ ಸ್ಪಷ್ಟನೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಿ.ವಿ.ಕಾರ್ಯಕ್ರಮವೊಂದರ ಶೂಟಿಂಗ್ ಸಲುವಾಗಿ ನಾನು ಮತ್ತು ರಜತ್ ಲಾಂಗ್ ಹಿಡಿದಿದ್ದಾಗಿ ಆ ಪತ್ರದಲ್ಲಿ ವಿನಯ್ ಸ್ಪಷ್ಟನೆ ನೀಡಿದ್ದಾರೆ.
ಪತಿಯ ಪರ ಠಾಣೆಗೆ ಬಂದಿದ್ದ ಪತ್ನಿ ಅಕ್ಷಿತಾ
ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ಆರೋಪಿ ರಜತ್ ಕಿಶನ್ ಪತ್ನಿ ಅಕ್ಷಿತಾ ಬಸವೇಶ್ವರನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಪತಿ ರಜತ್ ಶೂಟಿಂಗ್‌ನಲ್ಲಿ ಇರುವುದಾಗಿ ಹೇಳಿದ್ದಾರೆ. ಆದರೆ, ನೋಟಿಸ್‌ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಯೇ ವಿಚಾರಣೆಗೆ ಹಾಜರಾಗಬೇಕು ಎಂದು ಅಕ್ಷಿತಾ ಅವರನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ.