ಜೈಲಲ್ಲಿ ಇಂಥವರಿಗೆ ರಾಜಾತಿಥ್ಯ ಕೊಟ್ರೆ ಹುಷಾರ್‌ : ಸುಪ್ರೀಂ ಕಿಡಿ

| N/A | Published : Aug 15 2025, 01:00 AM IST / Updated: Aug 15 2025, 06:31 AM IST

actor darshan arrest

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌, ಅವರ ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರು ಸೇರಿ 7 ಆರೋಪಿಗಳಿಗೆ ಗುರುವಾರ ಭಾರೀ ಹಿನ್ನಡೆಯಾಗಿದ್ದು, ಈ ಎಲ್ಲ 7 ಮಂದಿಗೆ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ.

  ನವದೆಹಲಿ :  ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌, ಅವರ ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರು ಸೇರಿ 7 ಆರೋಪಿಗಳಿಗೆ ಗುರುವಾರ ಭಾರೀ ಹಿನ್ನಡೆಯಾಗಿದ್ದು, ಈ ಎಲ್ಲ 7 ಮಂದಿಗೆ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ. ಅಲ್ಲದೆ, ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶ ಹಾಗೂ ಜೈಲಲ್ಲಿ ಆಪಾದಿತರಿಗೆ ಸಿಕ್ಕ ರಾಜಾತಿಥ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅದು, ಜಾಮೀನು ಅರ್ಜಿ ಕೇಸುಗಳಲ್ಲಿ ದೇಶಕ್ಕೇ ಮಾನದಂಡ ಆಗಬಲ್ಲ ಆದೇಶ ನೀಡಿದೆ.

‘ಆರೋಪಿಗಳಿಗೆ ಜಾಮೀನು ನೀಡುವ ಹೈಕೋರ್ಟ್ ಆದೇಶ ಹಲವು ದೌರ್ಬಲ್ಯಗಳನ್ನು ಹೊಂದಿದೆ. ಇಂಥ ಗಂಭೀರ ಪ್ರಕರಣದಲ್ಲಿ ಪ್ರಭಾವಿ ಆರೋಪಿಗೆ ಜಾಮೀನು ನೀಡುವುದರಿಂದ ನ್ಯಾಯದಾನದ ಹಳಿ ತಪ್ಪಿಸುವ ಸಾಧ್ಯತೆ ಇದೆ. ಸೆಲೆಬ್ರಿಟಿ ಅಂದ ಮಾತ್ರಕ್ಕೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಜೈಲಲ್ಲಿ ಇಂಥವರಿಗೆ ರಾಜಾತಿಥ್ಯ ಸಲ್ಲದು. ನೀಡಿದರೆ ಜೈಲಧಿಕಾರಿಗಳ ಮೇಲೆ ಕ್ರಮ ಖಚಿತ’ ಎಂದಿದೆ. ಜತೆಗೆ, ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೂ ನಿರ್ದೇಶನ ನೀಡಿದೆ.

ಇದಲ್ಲದೆ, ತನ್ನ ಆದೇಶವನ್ನು ಎಲ್ಲ ರಾಜ್ಯಗಳ ಹೈಕೋರ್ಟ್‌ಗಳು ಹಾಗೂ ಜೈಲು ಅಧೀಕ್ಷಕರಿಗೆ ನೀಡುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿದೆ.

ಅತ್ತ ಸುಪ್ರೀಂ ಕೋರ್ಟ್‌ ಆದೇಶದ ಬೆನ್ನಲ್ಲೇ ಇತ್ತ ಬೆಂಗಳೂರಿನಲ್ಲಿ ದರ್ಶನ್‌, ಪವಿತ್ರಾಗೌಡ ಅವರಲ್ಲದೆ, ಪ್ರಕರಣದಲ್ಲಿನ ಇತರೆ ಐವರು ಆರೋಪಿಗಳಾದ ಲಕ್ಷ್ಮಣ್‌, ನಾಗರಾಜ್‌, ಪ್ರದೋಶ್‌, ಅನುಕುಮಾರ್‌ ಮತ್ತು ಜಗದೀಶ್‌ ಮತ್ತೆ ಕಂಬಿ ಪಾಲಾಗಿದ್ದಾರೆ.

ಕೋರ್ಟ್ ಹೇಳಿದ್ದೇನು?: ನಟ ದರ್ಶನ್‌ ಮತ್ತಿತರರಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್‌ನ ನ್ಯಾ.ಜೆ.ಬಿ.ಪರ್ದಿವಾಲಾ ಮತ್ತು ಆರ್‌.ಮಹದೇವನ್‌ ಅವರಿದ್ದ ಪೀಠ ಗುರುವಾರ ಸುದೀರ್ಘ ಖಡಕ್‌ ಆದೇಶ ಪ್ರಕಟಿಸಿತು.

‘ನಾವು ಜಾಮೀನು ಮತ್ತು ಅದನ್ನು ರದ್ದು ಮಾಡುವ ಹೀಗೆ ಎರಡೂ ಆದೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಜಾಮೀನು ನೀಡಿ ಹೈಕೋರ್ಟ್ ನೀಡಿದ ಆದೇಶ ಹಲವು ನ್ಯೂನತೆಗಳನ್ನು ಒಳಗೊಂಡಿದೆ. ಜಾಮೀನು ನೀಡಲು ಸೆಕ್ಷನ್‌ 302, 120ಬಿ ಮತ್ತು 34 ಐಪಿಸಿ ಅಡಿ ಯಾವುದೇ ವಿಶೇಷ ಅಥವಾ ಮಹತ್ವದ ಕಾರಣ ದಾಖಲಿಸಿಲ್ಲ. ಬದಲಾಗಿ ಕಾನೂನು ರೀತಿ ಪ್ರಾಸಂಗಿಕವಾಗಿರುವ ಅಂಶಗಳನ್ನು ಕೈಬಿಟ್ಟು ಹೈಕೋರ್ಟ್‌ ತನ್ನ ಶಕ್ತಿಯ ಯಾಂತ್ರಿಕ ಪ್ರಯೋಗದ ಮೂಲದ ನಟನಿಗೆ ಜಾಮೀನು ನೀಡಿದಂತಿದೆ’ ಎಂದು ಬೇಸರ ವ್ಯಕ್ತಪಡಿಸಿತು,

‘ಇಂಥ ಗಂಭೀರ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವುದರಿಂದ ನ್ಯಾಯದಾನಕ್ಕೆ ಅಪಾಯವಿರುತ್ತದೆ. ಇಂಥ ಗಂಭೀರ ಪ್ರಕರಣದಲ್ಲಿ ವಾಸ್ತವ ಮತ್ತು ಅಪರಾಧದ ತೀವ್ರತೆಯನ್ನು ಪರಿಗಣಿಸದೆ, ಆರೋಪಿಯ ಪಾತ್ರವನ್ನು ಪರಿಗಣಿಸದೆ ಜಾಮೀನು ನೀಡಲಾಗಿದೆ. ಪ್ರಕರಣದಲ್ಲಿ ತಥ್ಯದ ವಿಸ್ತೃತ ಪರಿಶೀಲನೆ ಬಳಿಕ ಜಾಮೀನು ನೀಡಲಾಗಿದೆ ಎಂದು ಹೈಕೋರ್ಟ್‌ ಹೇಳಿದೆ. ಆದರೆ, ಇದು ವಿಚಾರಣಾ ನ್ಯಾಯಾಲಯದ ವಿಶೇಷ ಅಧಿಕಾರವಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಪ್ರಭಾವಿ ಆರೋಪಿಗಳಿಗೆ ಜಾಮೀನು ನೀಡುವುದು ಆತಂಕದ ವಿಚಾರ. ಇದರಿಂದ ನ್ಯಾಯದಾನ ಹಳಿತಪ್ಪುವ ಸಾಧ್ಯತೆ ಇದೆ’ ಎಂದಿತು.

ಆರೋಪಿಯಿಂದ ಸಾಕ್ಷ್ಯ ನಾಶಕ್ಕೆ ಯತ್ನ:

‘ಸಿಸಿಟೀವಿ, ಕಾಲ್ ರೆಕಾರ್ಡ್, ಕೃತ್ಯಕ್ಕೆ ಬಳಸಿದ ವಸ್ತುಗಳು ಸೇರಿ ಪ್ರಮುಖ ಸಾಕ್ಷ್ಯಾಧಾರಗಳ ನಾಶಕ್ಕೆ ಆರೋಪಿ ಪ್ರಯತ್ನಪಟ್ಟಿದ್ದಾರೆ. ಎ1 ಆರೋಪಿ ಪವಿತ್ರಾಗೌಡ ಅವರು ದರ್ಶನ್‌ ಜತೆಗೆ ನಿರಂತರ ಸಂಪರ್ಕದಲ್ಲಿದ್ದರು, ಕೊಲೆ ನಡೆದಾಗ ಘಟನಾ ಸ್ಥಳದಲ್ಲೂ ಹಾಜರಿದ್ದರು. ಆದರೆ, ದರ್ಶನ್ ತಾವು ಘಟನಾ ಸ್ಥಳದಲ್ಲಿರಲಿಲ್ಲ ಎಂದು ವಾದಿಸಿದ್ದರು. ಆದರೆ ಕೊಲೆಗೂ ಮುನ್ನ ಇತರೆ ಆರೋಪಿಗಳ ಜೊತೆಗೆ ಅವರು ಸಂಪರ್ಕದಲ್ಲಿರುವುದು ಸಾಬೀತಾಗಿದೆ. ಹೀಗಾಗಿ ಕೊಲೆಗೆ ಇವರ ಪ್ರೇರಣೆಯೂ ಇದ್ದಂತಿದೆ’ ಎಂದು ಪೀಠ ಹೇಳಿತು.

‘ಬಂಧನದಲ್ಲಿದ್ದಾಗಲೂ ಜೈಲು ವ್ಯವಸ್ಥೆ ಮೀರಿ ರಾಜಾತಿಥ್ಯ ಪಡೆದ ವ್ಯಕ್ತಿ ಸಾಕ್ಷ್ಯಗಳನ್ನು ನಾಶ ಮಾಡುವ ಅಥವಾ ಅವರ ಮೇಲೆ ಬೆದರಿಕೆ ಹಾಕುವ ಸಾಧ್ಯತೆಗಳಿವೆ. ನಟ ದರ್ಶನ್ ಸಾಮಾನ್ಯ ವ್ಯಕ್ತಿಯಲ್ಲ, ಅಪಾರ ಜನಪ್ರಿಯತೆ ಮತ್ತು ಬೆಂಬಲಿಗರನ್ನು ಹೊಂದಿರುವ ಮತ್ತು ಆರ್ಥಿಕ, ರಾಜಕೀಯವಾಗಿ ಸಧೃಡವಾಗಿರುವ ವ್ಯಕ್ತಿ. ದರ್ಶನ್ ಜೈಲಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದು ಗಮನಕ್ಕೆ ಬಂದರೂ ಹೈಕೋರ್ಟ್ ಜಾಮೀನು ನೀಡಿದೆ. ಈ ವಿಚಾರಗಳು ಹೈಕೋರ್ಟ್ ತನ್ನ ವಿಚೇಚನೆ ಬಳಸಿಲ್ಲ ಎನ್ನುವುದಕ್ಕೆ ಪೂರಕವಾಗಿದೆ’ ಎಂದು ಕೋರ್ಟ್ ಕಿಡಿಕಾರಿತು.

ಅನಾರೋಗ್ಯದ ನೆಪಕ್ಕೆ ಕಿಡಿ:

‘ಜಾಮೀನು ಪಡೆಯಲು ದರ್ಶನ್‌ ಅನಾರೋಗ್ಯ ಕಾರಣಗಳನ್ನು ನೀಡಿದ್ದರು. ಇದೇ ಆಧಾರದ ಮೇಲೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದಂತಿದೆ. 28/11/24ರಲ್ಲಿ ವೈದ್ಯರು ನೀಡಿದ ವರದಿ ಪ್ರಕಾರ ದರ್ಶನ್‌ಗೆ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಸಣ್ಣ ಸಮಸ್ಯೆ ಇದೆ. ಮಂಬರುವ ದಿನಗಳಲ್ಲಿ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯ ಇದೆ. ಆದರೆ ಅದು ತುರ್ತಾಗಿ ಅಲ್ಲ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಜಾಮೀನು ಪಡೆದ ಬಳಿಕ ದರ್ಶನ್‌ ಸೂಕ್ತ ವೈದ್ಯಕೀಯ ಸೌಲಭ್ಯವನ್ನೂ ಪಡೆದೇ ಇಲ್ಲ’ ಎಂದು ಪೀಠ ಚಾಟಿ ಬೀಸಿತು.

‘ದರ್ಶನ್ ಪರ ವಕೀಲರು ಜಾಮೀನು ದುರುಪಯೋಗ ಪಡೆಸಿಕೊಂಡಿಲ್ಲ ಎಂದು ಹೇಳಿದ್ದರು. ಈ ಮೂಲಕ ಪ್ರಕರಣ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಾರದಂತೆ ದರ್ಶನ್ ಎ10, ಎ14 ಆರೋಪಿಗಳಿಗೆ ಶರಣಾಗುವಂತೆ ಹೇಳಿದ್ದರು. ಇದನ್ನು ಮಾಡಲು ಹಣವನ್ನೂ ಪಾವತಿಸಿದ್ದರು. ಪವಿತ್ರಾಗೌಡ ಮನೆಯ ಸಿಸಿಟೀವಿ ದೃಶ್ಯಗಳನ್ನೂ ಡಿಲೀಟ್‌ ಮಾಡಲಾಗಿದೆ. ದರ್ಶನ್ ಜಾಮೀನು ಪಡೆದ ಬಳಿಕ ಸಾಕ್ಷ್ಯಗಳ ಜೊತೆ ಬಹಿರಂಗವಾಗಿ ವೇದಿಕೆ ಹಂಚಿಕೊಂಡಿದ್ದಾರೆ. ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದರೂ ಸಿಸಿಟೀವಿ ದೃಶ್ಯಗಳ ನಾಶ, ಇನ್ನಿತರ ಆರೋಪಿಗಳನ್ನು ಶರಣಾಗುವಂತೆ ಹೇಳುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಪ್ರಭಾವ ಬಳಸಿದ್ದಾರೆ. ಈ‌ ಕೊಲೆ ದಿಢೀರ್‌ ಪ್ರಚೋದನೆ ಅಥಾವ ಭಾವನೆಗಳು ಸ್ಫೋಟಗೊಂಡು ಆದ ಕೃತ್ಯವಲ್ಲ. ಪುರಾವೆಗಳನ್ನು ನೋಡಿದಾಗ ಇದು ಪೂರ್ವಯೋಜಿತ, ಸಂಘಟಿತ ಅಪರಾಧ ಎಂಬುದನ್ನು ತೋರಿಸುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತು.

‘ವಿಚಾರಣಾ ನ್ಯಾಯಾಲಯವೊಂದೇ ಈ ಕುರಿತ ವಿಚಾರಣೆಗೆ ಸರಿಯಾದ ವೇದಿಕೆಯಾಗಿದೆ. ಆರೋಪಿಗಳ ವಿರುದ್ಧ ವಿಧಿವಿಜ್ಞಾನ ಸಾಕ್ಷ್ಯಗಳೊಂದಿಗೆ ನಿಖರ ಆರೋಪಗಳಿದ್ದು, ಇದು ಅವರ ಜಾಮೀನು ರದ್ದು ಮಾಡಲು ಸಾಕಿದೆ. ಹೀಗಾಗಿ ಆರೋಪಿಗಳಿಗೆ ಹೈಕೋರ್ಟ್‌ ನೀಡಿರುವ ಜಾಮೀನು ರದ್ದು ಮಾಡಲಾಗಿದೆ’ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.ಸೆಲೆಬ್ರಿಟಿ ಕಾನೂನಿಗಿಂತ ದೊಡ್ಡವರಲ್ಲ:

‘ಸೆಲಬ್ರಿಟಿ ಆದ ಮಾತ್ರಕ್ಕೆ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಸಮಾಜದಲ್ಲಿರುವ ಉನ್ನತ ವ್ಯಕ್ತಿ ಅಥವಾ ಖ್ಯಾತ ವ್ಯಕ್ತಿ ಮತ್ತು ಪ್ರಭಾವಶಾಲಿ ವ್ಯಕ್ತಿಯಾದರೂ ಅವರು ಕಾನೂನು ವ್ಯಾಪ್ತಿಯಿಂದ ಹೊರಗಿಲ್ಲ’ ಎಂದು ಜಾಮೀನು ರದ್ದು ಮಾಡಿದ ಪ್ರತ್ಯೇಕ ಆದೇಶ ಓದಿ ಹೇಳಿದ ನ್ಯಾ.ಪರ್ದಿವಾಲಾ ಹೇಳಿದರು.

‘ಯಾವುದೇ ಹಂತದಲ್ಲೂ ನ್ಯಾಯದಾನ ವ್ಯವಸ್ಥೆಯನ್ನು ಕಾಪಾಡಬೇಕು ಮತ್ತು ಯಾವ ಬೆಲೆ ತೆತ್ತಾದರೂ ಕಾನೂನು ನಿಯಮ ಪಾಲಿಸಬೇಕಿದೆ ಎಂಬ ಸ್ಪಷ್ಟ ಸಂದೇಶವನ್ನು ಈ ತೀರ್ಪು ನೀಡುತ್ತದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ದೊಡ್ಡವರೂ ಅಲ್ಲ, ಸಣ್ಣವರೂ ಅಲ್ಲ. ನಾವು ಕಾನೂನು ಪಾಲಿಸುವಾಗ ಇನ್ನೊಬ್ಬರ ಅನುಮತಿ ಕೇಳಬೇಕಾಗಿಲ್ಲ’ ಎಂದು ಹೇಳಿದರು.ವಿಶೇಷ ಸೌಲಭ್ಯ ಕಲ್ಪಿಸುವಂತಿಲ್ಲ:

ಇದೇ ವೇಳೆ ನ್ಯಾಯಾಲಯವು, ಆರೋಪಿಯು ಪ್ರಭಾವಿ ಎನ್ನುವ ಕಾರಣಕ್ಕೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವಂತಿಲ್ಲ ಎಂದೂ ಎಚ್ಚರಿಸಿತು. ‘ದರ್ಶನ್‌ ಜೈಲಿನೊಳಗೆ ತನ್ನ ಪ್ರಭಾವ ದುರುಪಯೋಗಪಡಿಸಿಕೊಳ್ಳುವ ಕುರಿತ ಫೋಟೋ ಅಥವಾ ಸಾಕ್ಷ್ಯವೇನಾದರೂ ಕಂಡು ಬಂದರೆ ಅಧಿಕಾರಿಗಳು ಕೋರ್ಟ್‌ಗೇ ದೂರು ನೀಡಬೇಕು. ಜೈಲಿನಲ್ಲಿ ಆರೋಪಿಗೆ ಫೈವ್‌ಸ್ಟಾರ್‌ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬುದು ತಿಳಿದ ಕೂಡಲೇ ನಾವು ಮೊದಲ ಹೆಜ್ಜೆಯಾಗಿ ಜೈಲಿನ ಸೂಪರಿಂಟೆಂಡೆಂಟ್‌ ಅವರನ್ನು ಇತರೆ ಅಧಿಕಾರಿಗಳೊಂದಿಗೆ ಅಮಾನತು ಮಾಡುತ್ತೇವೆ’ ಎಂದು ಖಡಕ್ಕಾಗಿ ನುಡಿಯಿತು.

ಏನಿದು ಪ್ರಕರಣ?:

ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಮೆಸೇಜ್‌ ಕಳಿಸಿದ್ದ ಎಂದು ಆರೋಪಿಸಿ ದರ್ಶನ್‌ ಮತ್ತು ಗ್ಯಾಂಗ್‌ ಆತನನ್ನು ಕಳೆದ ವರ್ಷ ಜೂನ್‌ನಲ್ಲಿ ಹಿಗ್ಗಾಮುಗ್ಗಾ ಹೊಡೆದು ಸಾಯಿಸಿತ್ತು.ಬಳಿಕ ದರ್ಶನ್‌ರನ್ನು ಹಾಗೂ ಇತರರನ್ನು ಜೂ.11ರಂದು ಬಂಧಿಸಲಾಗಿತ್ತು. ಅ.30ರಂದು ಹೈಕೋರ್ಟ್‌ ದರ್ಶನ್‌ಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಡಿ.13ರಂದು ದರ್ಶನ್‌, ಪವಿತ್ರಾ, ಇತರೆ ಐವರು ಆರೋಪಿಗಳಿಗೆ ಹೈಕೋರ್ಟ್‌ ಕಾಯಂ ಜಾಮೀನು ನೀಡಿತ್ತು.

ದರ್ಶನ್‌ಗೆ ಜಾಮೀನು ಕೊಟ್ಟರೆ

ಕೆಟ್ಟ ಸಂದೇಶ: ಸುಪ್ರೀಂಕೋರ್ಟ್

1. ಯಾರೊಬ್ಬರೂ ಕಾನೂನಿಗಿಂತ ಮೇಲೂ ಇಲ್ಲ, ಕೆಳಗೂ ಇಲ್ಲ. ಕಾನೂನು ಪಾಲಿಸುವಂತೆ ಹೇಳಲು ಅನುಮತಿ ಬೇಕಿಲ್ಲ

2. ದರ್ಶನ್‌ ಸಾಮಾನ್ಯ ಅಲ್ಲ. ಸೆಲೆಬ್ರಿಟಿ. ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜಕೀಯ, ಆರ್ಥಿಕವಾಗಿ ಬಲಶಾಲಿ ಆಗಿದ್ದಾರೆ

3. ಜೈಲಿನಲ್ಲಿದ್ದಾಗಲೂ ವಿಐಪಿ ಸೌಲಭ್ಯ ಪಡೆದಿದದ್ದಾರೆ. ವ್ಯವಸ್ಥೆಯನ್ನೇ ಉಲ್ಲಂಘಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ

4. ಜಾಮೀನು ಸಿಕ್ಕ ಬಳಿಕವೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದಾರೆ. ಸಾಕ್ಷಿಗಳ ಜತೆ ವೇದಿಕೆ ಹಂಚಿಕೊಂಡಿದ್ದಾರೆ

5. ಸಲೆಬ್ರಿಟಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಅವರ ಮೇಲೆ ಹೊಣೆಗಾರಿಕೆ ಹೆಚ್ಚಿರುತ್ತದೆಯೇ ಹೊರತು ಕಡಿಮೆ ಅಲ್ಲ

6. ಗಂಭೀರ ಆರೋಪ ಹೊತ್ತಿರುವ ವ್ಯಕ್ತಿಗೆ ವಿನಾಯಿತಿ ತೋರಿದರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ವಿಶ್ವಾಸ ಕುಂದುತ್ತದೆ

7. ಇದು ಗೊತ್ತಿದ್ದರೂ ದರ್ಶನ್‌ಗೆ ಜಾಮೀನು ಕೊಟ್ಟ ಹೈಕೋರ್ಟ್‌ ಆದೇಶವೇ ಸರಿ ಇಲ್ಲ. ಹೈಕೋರ್ಟ್‌ ವಿವೇಚನೆ ಬಳಸಿಲ್ಲ

8. ಆರೋಪಿಗಳಿಗೆ ಜೈಲಿನಲ್ಲಿ ಪಂಚತಾರಾ ಸವಲತ್ತು ನೀಡಿದ ವಿಷಯ ದಿನವೇ ಜೈಲಧಿಕಾರಿಗಳು ಅಮಾನತಾಗುತ್ತಾರೆ

9.ಈ ಆದೇಶವನ್ನು ದೇಶ ಎಲ್ಲ ಹೈಕೋರ್ಟ್‌ಗಳು, ಜೈಲು ಅಧೀಕ್ಷಕರಿಗೂ ಸುಪ್ರೀಂಕೋರ್ಟ್‌ ರಿಜಿಸ್ಟ್ರಾರ್‌ ಕಳುಹಿಸಬೇಕು 

Read more Articles on