ಸಾರಾಂಶ
ನವದೆಹಲಿ: ಜನನ ಪ್ರಮಾಣ ಪತ್ರ ತಿರುಚಿದ ಆರೋಪದಲ್ಲಿ ಭಾರತದ ತಾರಾ ಶಟ್ಲರ್ ಲಕ್ಷ್ಯಸೇನ್, ಅವರ ಕುಟುಂಬಸ್ಥರು ಮತ್ತು ಕೋಚ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.ಲಕ್ಷ್ಯ ಸೇನ್ ಮತ್ತು ಅವರ ಸಹೋದರ ಚಿರಾಗ್ ಸೇನ್‌ರ ನೈಜ ವಯಸ್ಸನ್ನು ತಿರುಚಲಾಗಿದ್ದು, ಎರಡೂವರೆ ವರ್ಷ ಕಡಿಮೆ ಮಾಡಿ ಜನನ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ.
ಪಂದ್ಯಗಳಲ್ಲಿ ಭಾಗವಹಿಸಲು ಮತ್ತು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಕೋರಿ ಸೇನ್ ಸಹೋದರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅದಕ್ಕೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಹೀಗಾಗಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು. ನ್ಯಾ.ಸುಧಾಂಶು ಧುಲಿಯಾ, ಅರವಿಂದ್ ಕುಮಾರ್ ಇದ್ದ ಪೀಠ ಎಫ್‌ಐಆರ್ ರದ್ದುಗೊಳಿಸಿ ಆದೇಶಿಸಿತು.
ಇಂದು ಮಕಾವ್ ಓಪನ್ ಬ್ಯಾಡ್ಮಿಂಟನ್ ಆರಂಭ
ಮಕಾವ್: ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್, ಪುರುಷ ಸಿಂಗಲ್ಸ್ ಆಟಗಾರರಾದ ಲಕ್ಷ್ಯ ಸೇನ್, ಪ್ರಣಯ್ ಕಣದಲ್ಲಿದ್ದಾರೆ. ಇತ್ತೀಚೆಗಷ್ಟೇ ಯುಎಸ್ ಓಪನ್ ಗೆದ್ದಿದ್ದ ಕರ್ನಾಟಕದ ಆಯುಶ್ ಶೆಟ್ಟಿ, ಸತೀಶ್ ಕರುಣಾಕರನ್, ತರುಣ್, ಶಂಕರ್ ಮುತ್ತುಸ್ವಾಮಿ, ಕಿರಣ್ ಜಾರ್ಜ್ ಕೂಡಾ ಆಡಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಉನ್ನತಿ ಹೂಡಾ, ರಕ್ಷಿತಾ, ಅನುಪಮಾ ಉಪಾಧ್ಯಾಯ, ಆಕರ್ಷಿ ಕಶ್ಯಪ್, ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ, ಪ್ರಿಯಾ-ಶ್ರುತಿ, ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲಾ-ತನಿಶಾ ಕ್ರಾಸ್ಟೊ ಸ್ಪರ್ಧಿಸಲಿದ್ದಾರೆ.