ಸಾರಾಂಶ
ಬೆಂಗಳೂರು : ಹಳೇ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಹಾಗೂ ಆತನ ಸಹಚರರು ಎದುರಾಳಿ ಗ್ಯಾಂಗ್‌ನ ರೌಡಿ ಶೀಟರ್ ಹಾಗೂ ಆತನ ಸಹಚರರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೆ.26ರಂದು ಲಗ್ಗೆರೆಯ ಕಪೀಲನಗರದ 4ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆ ರೌಡಿ ಶೀಟರ್ ನರೇಂದ್ರ ಅಲಿಯಾಸ್ ದಾಸ(22) ಹಲ್ಲೆಯಿಂದ ಗಾಯಗೊಂಡಿದ್ದಾನೆ. ಈತ ನೀಡಿದ ದೂರಿನ ಮೇರೆಗೆ ರಮೇಶ್ ಅಲಿಯಾಸ್ ಬಳಿಲು, ನಂದಿನಿ ಲೇಔಟ್ ಠಾಣೆ ರೌಡಿ ಶೀಟರ್ ಸಂಕೇತ್, ತೇಜಸ್ ಅಲಿಯಾಸ್ ಟೈಗರ್, ಮಂಜುನಾಥ, ದೀಕ್ಷಿತ್, ಅರುಣ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚಿಸಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?: ರೌಡಿ ನರೇಂದ್ರ ಮತ್ತು ಆರೋಪಿ ರಮೇಶ್ ಮೂರು ವರ್ಷಗಳ ಹಿಂದೆ ಲಗ್ಗೆರೆಯಲ್ಲಿ ಸ್ನೇಹಿತರಾಗಿದ್ದರು. ರಮೇಶ್ ಸ್ನೇಹಿತ ಮನು ಎಂಬಾತ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದಾಗ ನರೇಂದ್ರ, ಮನು ಮೇಲೆ ಹಲ್ಲೆ ಮಾಡಿದ್ದ. ಈ ಹಲ್ಲೆಯಿಂದ ಕೆರಳಿದ ರಮೇಶ್, ಮನು ಹಾಗೂ ಸಹಚರರು ಕುರುಬರಹಳ್ಳಿಯಲ್ಲಿ ನರೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಘಟನೆಯಿಂದ ರಮೇಶ್ ಹಾಗೂ ಆತನ ಸಹಚರರು, ರೌಡಿ ನರೇಂದ್ರನ ಮೇಲೆ ದ್ವೇಷ ಕಾರುತ್ತಿದ್ದರು.
ಪಾರ್ಟಿ ಮಾಡುವಾಗ ನುಗ್ಗಿ ಹಲ್ಲೆ: ಸೆ.26ರಂದು ರಾತ್ರಿ ಸುಮಾರಿಗೆ 11.15ಕ್ಕೆ ರೌಡಿ ನರೇಂದ್ರ ಹಾಗೂ ಸಹಚರರು, ಲಗ್ಗೆರೆ ಕಪಿಲಾನಗರದ 4ನೇ ಕ್ರಾಸ್‌ನ ಸ್ನೇಹಿತ ವಿಕ್ರಮ ಅಲಿಯಾಸ್ ವಿಕ್ಕಿಯ ಮನೆಯ ಮಹಡಿಯಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಎದುರಾಳಿ ಗ್ಯಾಂಗ್‌ನ ರಮೇಶ್, ರೌಡಿ ಸಂಕೇತ್ ಹಾಗೂ ಸಹಚರರು ಮಾರಕಾಸ್ತ್ರ ಹಿಡಿದು ಮಹಡಿಗೆ ನುಗ್ಗಿ ನರೇಂದ್ರನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನರೇಂದ್ರ ಗಾಯಗೊಂಡು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸಹಚರರು ಜೋರಾಗಿ ಕಿರುಚಾಡಿದ್ದಾರೆ.
ಬಳಿಕ ವಿರೋಧಿ ಗ್ಯಾಂಗ್‌ನ ರಮೇಶ್ ಹಾಗೂ ಆತನ ಸಹಚರರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಗಾಯಾಳು ರೌಡಿ ನರೇಂದ್ರನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಈ ಸಂಬಂಧ ರೌಡಿ ನರೇಂದ್ರ ನೀಡಿದ ದೂರಿನ ಮೇರೆಗೆ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
)
)
)
;Resize=(128,128))
;Resize=(128,128))
;Resize=(128,128))
;Resize=(128,128))