ರೋಡ್‌ ರೇಜ್‌ : ಕಾರು ಚಾಲಕನ ಜತೆಗೆ ಆಟೋ ಚಾಲಕ ಕಿರಿಕ್‌

| N/A | Published : Apr 28 2025, 01:31 AM IST / Updated: Apr 28 2025, 06:00 AM IST

ಸಾರಾಂಶ

ನಡು ರಸ್ತೆಯಲ್ಲಿ ಆಟೋ ನಿಲ್ಲಿಸಿದ ಚಾಲಕನೊಬ್ಬ ಕಾರು ಚಾಲಕನ ಜೊತೆಗೆ ದುರ್ವರ್ತನೆ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

  ಬೆಂಗಳೂರು : ನಡು ರಸ್ತೆಯಲ್ಲಿ ಆಟೋ ನಿಲ್ಲಿಸಿದ ಚಾಲಕನೊಬ್ಬ ಕಾರು ಚಾಲಕನ ಜೊತೆಗೆ ದುರ್ವರ್ತನೆ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಳೆದ ಶುಕ್ರವಾರ ರಾತ್ರಿ ಸುಮಾರು 8.40ಕ್ಕೆ ಲಿಂಗರಾಜಪುರ ಕೆಳಸೇತುವೆ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಟೋ ಚಾಲಕನೊಬ್ಬ ನಡು ರಸ್ತೆಯಲ್ಲಿ ಆಟೋ ನಿಲ್ಲಿಸಿ ಕೆಳಗೆ ಇಳಿದು ಕಾರು ಚಾಲಕನ ಜತೆಗೆ ದುರ್ವರ್ತನೆ ತೋರಿದ್ದಾನೆ. ಕಾರಿನೊಳಗೆ ಕುಳಿತು ಚಾಲಕ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕ ಕೆಳಗೆ ಇಳಿದು ವಿಡಿಯೋ ಮಾಡೋ, ನನ್ನ ಆಟೋ ನೋಂದಣಿ ಸಂಖ್ಯೆಯನ್ನೂ ವಿಡಿಯೋ ಮಾಡೋ ಎಂದು ಆವಾಜ್‌ ಹಾಕಿದ್ದಾನೆ.

ನಡುರಸ್ತೆಯಲ್ಲಿ ಆಟೋ ನಿಲುಗಡೆ ಮಾಡಿದ್ದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದ್ದಾರೆ. ಕೆಲ ಹೊತ್ತಿನ ಬಳಿಕ ಆಟೋ ಚಾಲಕ ಆಟೋ ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಈ ಇಡೀ ಘಟನೆಯನ್ನು ಕಾರು ಚಾಲಕ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಎಕ್ಸ್‌ ಖಾತೆಯಲ್ಲಿ ಪೋಸ್ಟ್‌:

ಈ ಆಟೋ ಚಾಲಕನ ದುರ್ವರ್ತನೆಯ ವಿಡಿಯೋವನ್ನು ಸುಮಿತ್‌ ಮುಖರ್ಜಿ ಎಂಬುವವರು ಸಾಮಾಜಿಕ ಜಾಲತಾಣ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆಟೋ ಚಾಲಕನೊಬ್ಬ ಏಕಾಏಕಿ ಕಾರಿನ ಎದುರು ದಿಢೀರ್‌ ಬ್ರೇಕ್‌ ಹಾಕಿ ನಿಲ್ಲಿಸಿದ. ಅದಕ್ಕೆ ನಾನು ಹಾರನ್‌ ಮಾಡಿದೆ. ಅಷ್ಟಕ್ಕೆ ಆತ ದುರ್ವರ್ತನೆ ತೋರಿದ್ದಾನೆ. ಬೆಂಗಳೂರಿನಲ್ಲಿ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿ, ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದಾರೆ. ಹಲವು ನೆಟ್ಟಿಗರು ಆಟೋ ಚಾಲಕನ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.