ಸಾರಾಂಶ
ಬಾರ್‌ನಲ್ಲಿ ಗುರಾಯಿಸಿದ ರೌಡಿ, ಮಾಯಾ ಬಜಾರ್ ನಿವಾಸಿ ಮಿಲ್ಟ್ರಿ ಸತೀಶ್‌ನನ್ನು ಆತನ ಮನೆಗೇ ನುಗ್ಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾರ್‌ನಲ್ಲಿ ಗುರಾಯಿಸಿ ಬೈದ ರೌಡಿಯೊಬ್ಬನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದು ದುಷ್ಕರ್ಮಿಗಳು ಪರಾರಿ ಆಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ.ಮಾಯಾ ಬಜಾರ್ ನಿವಾಸಿ ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ (31) ಕೊಲೆಯಾದ ದುರ್ದೈವಿ. ಮನೆಯಲ್ಲಿ ಒಬ್ಬನೇ ನೆಲಿಸಿದ್ದ ಸತೀಶ್ ಮೇಲೆ ನಾಲ್ಕೈದು ಮಂದಿ ಸ್ಥಳೀಯ ಯುವಕರೇ ಹಲ್ಲೆ ನಡೆಸಿ ಕೊಂದಿದ್ದಾರೆ. ಈ ಕೃತ್ಯದಲ್ಲಿ ಪಾಲ್ಗೊಂಡಿರುವವರ ಮಾಹಿತಿ ಸಿಕ್ಕಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
ಹಲವು ವರ್ಷಗಳಿಂದ ಪಾತಕಲೋಕದಲ್ಲಿ ಸತೀಶ ಸಕ್ರಿಯವಾಗಿದ್ದು, ಆತನ ಮೇಲೆ ಕೊಲೆ ಯತ್ನ ಸೇರಿದಂತೆ ಎರಡು ಪ್ರಕರಣಗಳು ದಾಖಲಾಗಿವೆ. ಈ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸತೀಶನ ಮೇಲೆ ವಿವೇಕನಗರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಕೆಲ ದಿನಗಳ ಹಿಂದೆ ಮದ್ಯ ಸೇವನೆಗೆ ಬಾರ್‌ಗೆ ಹೋಗಿದ್ದಾಗ ಸ್ಥಳೀಯ ಹುಡುಗರ ಜತೆ ಸತೀಶ ಗಲಾಟೆ ಮಾಡಿಕೊಂಡಿದ್ದ.ಇದೇ ಜಿದ್ದಿನಲ್ಲಿ ಆತನ ಕೊಲೆಗೆ ಸಂಚು ರೂಪಿಸಿದ ಆರೋಪಿಗಳು, ಮಾಯಾ ಬಜಾರ್‌ನಲ್ಲಿ ಒಂಟಿಯಾಗಿ ಸತೀಶ ನೆಲೆಸಿರುವ ಖಚಿತ ಮಾಹಿತಿ ಪಡೆದು ಬುಧವಾರ ನಸುಕಿನ 3 ಗಂಟೆಯಲ್ಲಿ ದಾಳಿ ನಡೆಸಿದ್ದಾರೆ. ಮೃತನ ಮನೆಗೆ ಬಾಗಿಲು ಸಹ ಇರಲಿಲ್ಲ. ಹೀಗಾಗಿ ಸಲೀಸಲಾಗಿ ಆತನ ಮನೆಗೆ ನುಗ್ಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.