ಮರಳು ದಂಧೆ ದ್ವೇಷದ ಹಿನ್ನೆಲೆಯಲ್ಲಿ ಬಾರೊಂದರಲ್ಲಿ ಎರಡು ಯುವಕರ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಒಂದು ಗುಂಪು ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಬಳಿ ಮಂಗಳವಾರ ರಾತ್ರಿ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮರಳು ದಂಧೆ ದ್ವೇಷದ ಹಿನ್ನೆಲೆಯಲ್ಲಿ ಬಾರೊಂದರಲ್ಲಿ ಎರಡು ಯುವಕರ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಒಂದು ಗುಂಪು ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಬಳಿ ಮಂಗಳವಾರ ರಾತ್ರಿ ಜರುಗಿದೆ.

ತಾಲೂಕಿನ ಚುಂಚಗನಹಳ್ಳಿ ಕೃಷ್ಣ ಅವರ ಪುತ್ರ ಸುನೀಲ್ (29) ಹತ್ಯೆಯಾದ ಯುವಕ. ಈತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು ಕತ್ತು ಮತ್ತು ಎಡ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಸುನಿಲ್‌ನನ್ನು ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೆ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾನೆ.

ತಾಲೂಕು ಅಜ್ಜಹಳ್ಳಿಯ ಎ.ಎಸ್.ವಿಷಕಂಠ ಪುತ್ರ ನಿಶಾಂತ್ (28) ಸೇರಿದಂತೆ ಮೂರರಿಂದ ನಾಲ್ವರು ಯುವಕರ ಗುಂಪು ಸುನಿಲ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಘಟನೆ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭರಾಣಿ, ಡಿವೈಎಸ್ಪಿ ಯಶ್ವಂತ್‌ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಕೊಲೆಯಾಗಿರುವ ಸುನಿಲ್ ಬೆಂಗಳೂರಿನಲ್ಲಿ ವಾಸವಾಗಿದ್ದ. ಒಂದು ವರ್ಷದ ನಂತರ ಚುಂಚಗನಹಳ್ಳಿಗೆ ಬಂದು ಕೃಷಿ ಜೊತೆಗೆ ಹಸು ಸಾಕಾಣಿಕೆ ಫಾರಂ ಮತ್ತು ಜೆಸಿಪಿ ಯಂತ್ರಗಳನ್ನು ಇಟ್ಟುಕೊಂಡು ಮರಳು ಮತ್ತು ಮಣ್ಣು ಸಾಗಿಸುವ ಕೆಲಸ ಮಾಡಿಕೊಂಡಿದ್ದ.

ಬನ್ನಹಳ್ಳಿಯ ಲಕ್ಷ್ಮಿತ್ ರನ್ನು ಪ್ರೀತಿಸಿ ವಿವಾಹವಾಗಿದ್ದನು. ಈಕೆ ಈಗ ಆರು ತಿಂಗಳ ಗರ್ಭಿಣಿ. ಪತ್ನಿಯ ವೈದ್ಯಕೀಯ ವರದಿ ತರಲು ಬೆಂಗಳೂರಿಗೆ ತೆರಳಿದ್ದ ಸುನಿಲ್, ಆಕೆ ಸೀಮಂತ ಶಾಸ್ತ್ರದ ಸಿದ್ಧತೆ ನಡೆಸಲು ಸ್ವಗ್ರಾಮಕ್ಕೆ ಬರುತ್ತಿದ್ದ.

ಮಾರ್ಗ ಮಧ್ಯೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯ ದೀಪಾ ಬಾರೊಂದರಲ್ಲಿ ಸ್ನೇಹಿತರಾದ ಸತೀಶ್, ಸಿದ್ದು ಅವರೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಆರೋಪಿಗಳಾದ ಅಜ್ಜಹಳ್ಳಿ ಗ್ರಾಮದ ನಿಶಾಂತ್ ಮತ್ತು ಆತನ ಸ್ನೇಹಿತರೊಂದಿಗೆ ಮರಳು ದಂಧೆ ದ್ವೇಷ ಹಿನ್ನೆಲೆಯಲ್ಲಿ ಪರಸ್ಪರ ಗಲಾಟೆ ನಡೆದು ತಳ್ಳಾಟ, ನೂಕಾಟ ನಡೆದಿದೆ.

ಬಳಿಕ ಬಾರ್‌ನಿಂದ ಹೊರಬರುವಾಗ ಸುನೀಲ್ ಹೋಗಿ ಬರುತ್ತೇನೆ ಬಾಸ್ ಎಂದು ಕ್ಯಾಷಿಯರ್ ಕಡೆ ತಿರುಗಿ ಮಾತನಾಡುತ್ತಾನೆ. ಈ ಮಧ್ಯೆ ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆ ನಡೆದಿದೆ. ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ಸುನೀಲ್‌ನನ್ನು ಹಿಂಬಾಲಿಸಿಕೊಂಡು ಬಂದ ನಿಶಾಂತ್ ಮತ್ತು ನಾಲ್ಕೈದು ಮಂದಿ ಗುಂಪು ಕೆ.ಹೊನ್ನಲಗೆರೆ ಗ್ರಾಮದ ಚೌಡೇಶ್ವರಿ ಸಮುದಾಯದ ಬಳಿ ಬೈಕ್ ತಡೆದು ಏಕಾಏಕಿ ಸುನೀಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಮರಳು ದಂಧೆ ನಡೆಸುತ್ತಿದ್ದ ನಿಶಾಂತ್‌

ಮದ್ದೂರು:

ತಾಲೂಕಿನ ಅಜ್ಜಹಳ್ಳಿಯ ಆರೋಪಿ ನಿಶಾಂತ್ ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ ನಡೆಸುತ್ತಿದ್ದರು. ಈ ಹಿಂದೆ ಗಲಾಟೆ ನಡೆದು ಪ್ರಕರಣ ಮದ್ದೂರು ಠಾಣೆ ಮೆಟ್ಟಿಲೇರಿತ್ತು.

ಈ ಬಗ್ಗೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅವರು ಭೂವಿಜ್ಞಾನ ಅಧಿಕಾರಿಯನ್ನು ಕರೆದು ದಂಧೆಯನ್ನು ತಡೆಗಟ್ಟುವಂತೆ ಸೂಚನೆ ನೀಡಿದ್ದರಲ್ಲದೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ತಾಕೀತು ಮಾಡಿದ್ದರು.

ಮಹೇಶ್ ಅವರ ಸ್ಥಾನಕ್ಕೆ ವರ್ಗಾವಣೆಯಾಗಿ ಬಂದ ವೆಂಕಟೇಶ್ ಅವರು ಮರಳು ದಂಧೆ ತಡೆಗಟ್ಟುವಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆಗಲೂ ಸಹ ತಹಸೀಲ್ದಾರ್ ಸತ್ತಿಗೇರಿ ಅವರು ಮರಳು ದಂಧೆ ತಡೆಗೆ ಎಚ್ಚರಿಕೆ ನೀಡಿದ್ದರೂ ಸಹ ವೆಂಕಟೇಶ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪದೇ ಪದೇ ಮದ್ದೂರು ಶಿಂಷಾ ನದಿ ಪಾತ್ರದಲ್ಲಿ ಮರಳು ದಂಧೆ ನಡೆಯುತ್ತಿದ್ದು, ಅಧಿಕಾರಿಗಳಾಗಲೀ, ಪೊಲೀಸರಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.