ಸಾರಾಂಶ
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಶೀಟ್ ಕದ್ದು ಪರಾರಿ ಆಗುವಾಗ ಸಿಕ್ಕಿಬಿದ್ದ ಇಬ್ಬರು ಯುವಕರ ಮೇಲೆ ಸೆಕ್ಯೂರಿಟಿ ಗಾರ್ಡ್‌ಗಳು ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಒಬ್ಬ ಮೃತಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಂಜನಾಪುರದ ಆವಲಹಳ್ಳಿ ನಿವಾಸಿ ಸಲ್ಮಾನ್ (25) ಮೃತ. ಸಲೀಂ ಎಂಬಾತ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆ ಸಂಬಂಧ ಇಬ್ಬರು ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌತ್ ಅವೆನ್ಯೂ ಲೇಔಟ್‌ನಲ್ಲಿ ಗುರುವಾರ ಮುಂಜಾನೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಆವಲಹಳ್ಳಿ ನಿವಾಸಿಗಳಾದ ಸಲ್ಮಾನ್ ಮತ್ತು ಸಲೀಂ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಸೌತ್ ಅವೆನ್ಯೂ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದ ಬಳಿ ಬಂದು ಎರಡು ಸೆಂಟ್ರಿಂಗ್ ಶೀಟ್‌ಗಳನ್ನು ಕದ್ದು ಪರಾರಿ ಆಗಲು ಮುಂದಾಗಿದ್ದಾರೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್‌ಗಳು ಈ ಇಬ್ಬರನ್ನು ಹಿಡಿದುಕೊಂಡು ಕೈ-ಕಾಲು ಕಟ್ಟಿಹಾಕಿ ಕೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಸಲ್ಮಾನ್ ಪ್ರಜ್ಞೆ ತಪ್ಪಿದ್ದಾನೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್‌ಗಳು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ಹೊಯ್ಸಳ ಪೊಲೀಸರು ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಸಲ್ಮಾನ್ ಈಗಾಗಲೇ ಮೃತಟ್ಟಿರುವುದಾಗಿ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಲೀಂಗೆ ಚಿಕಿತ್ಸೆ ಮುಂದುವರೆದಿದೆ. ಕೋಣನಕುಂಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.