ಮದ್ಯ ಸೇವಿಸಿ ಕಾರನ್ನು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಅಫಘಾತ ನಡೆದಿರುವುದು.

 ಬೆಂಗಳೂರು : ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸಂಭವಿಸಿದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಾಯತ್ರಿ ನಗರ ನಿವಾಸಿ ವಿನಯ್‌ (32) ಮೃತ ಸವಾರ. ಹಿಂಬದಿ ಸವಾರ ಮಹೇಶ್‌ (30) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ರಹ್ಮಣ್ಯನಗರ ಮುಖ್ಯರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಸುಮಾರು 1.50ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದು ಕಾರು, ಆಟೋರಿಕ್ಷಾ ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಘಟನೆ ಸಂಬಂಧ ಕಾರು ಚಾಲಕ ಹರಿನಾಥ್‌(45) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ:

ಕಾರು ಚಾಲಕ ಹರಿನಾಥ್‌ ಮದ್ಯ ಸೇವಿಸಿ ಕಾರು ಚಲಾಯಿಸಿಕೊಂಡು ಸುಬ್ರಹ್ಮಣ್ಯನಗರ ಮುಖ್ಯರಸ್ತೆಯಲ್ಲಿ ಬಂದಿದ್ದಾನೆ. ಈ ವೇಳೆ ಶಾಲೆಯೊಂದರ ಎದುರು ನಿಂತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮುಂದೆ ಸಾಗಿ ವಿನಯ್‌ ಮತ್ತು ಮಹೇಶ್‌ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಸವಾರರು ರಸ್ತೆಗೆ ಬಿದ್ದಿದ್ದಾರೆ. ಆಗ ದ್ವಿಚಕ್ರ ವಾಹನ ಸಹಿತ ವಿಯನ್‌ನನ್ನು ಕಾರು ಸುಮಾರು ನೂರು ಮೀಟರ್‌ ಮುಂದಕ್ಕೆ ಎಳೆದೊಯ್ದು ನಿಂತಿದೆ.

ಗಂಭೀರವಾಗಿ ಗಾಯಗೊಂಡಿದ್ದ ವಿನಯ್‌ ಮತ್ತು ಮಹೇಶ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರ ರಕ್ತಸ್ರಾವಾಗಿದ್ದ ವಿನಯ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.