ಮಗಳ ಆತ್ಮಹತ್ಯೆಯಿಂದ ಆಘಾತಗೊಂಡ ತಾಯಿಯೂ ನೇಣಿಗೆ ಬಿಗಿದುಕೊಂಡು ಸಾವಿಗೆ ಶರಣು

| N/A | Published : Jul 15 2025, 09:13 AM IST

daughter and Mother Death in Bengaluru

ಸಾರಾಂಶ

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಬೇಸರಗೊಂಡು ತಾಯಿ-ಮಗಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವೈಟ್‌ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

 ಬೆಂಗಳೂರು :  ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಬೇಸರಗೊಂಡು ತಾಯಿ-ಮಗಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವೈಟ್‌ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ನಾಗಗೊಂಡನಹಳ್ಳಿ ನಿವಾಸಿಗಳಾದ ಶ್ರೀಜಾ ರೆಡ್ಡಿ (24) ಹಾಗೂ ಅವರ ತಾಯಿ ರಚಿತಾ ರೆಡ್ಡಿ (48) ಮೃತ ದುರ್ದೈವಿಗಳು.

ಮನೆಯಲ್ಲಿ ಮೊದಲು ತನ್ನ ಕೋಣೆಯಲ್ಲಿ ಶ್ರೀಜಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಮಗಳ ಸಾವಿನಿಂದ ಆಘಾತಗೊಂಡು ರಚಿತಾ ಸಹ ನೇಣಿಗೆ ಕೊರಳೊಡ್ದಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತ ರಚಿತಾ ಅವರ ಪತಿ ಮನೆಗೆ ಮರಳಿದ ಮೇಲೆ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ಖಾಸಗಿ ಕಂಪನಿ ಉದ್ಯೋಗಿ ಶ್ರೀಧರ್ ರೆಡ್ಡಿ ಅವರು ತಮ್ಮ ಪುತ್ರಿ ಶ್ರೀಜಾ ಹಾಗೂ ಪತ್ನಿ ರಚಿತಾ ಜತೆ ನೆಲೆಸಿದ್ದರು. ಸಾಫ್ಟ್‌ವೇರ್ ಕಂಪನಿಯಲ್ಲಿ ಶ್ರೀಜಾ ಉದ್ಯೋಗದಲ್ಲಿದ್ದರು. ಈ ದಂಪತಿಗೆ ಒಬ್ಬಳೇ ಮಗಳಾಗಿದ್ದ ಶ್ರೀಜಾ ತುಂಬಾ ಸೂಕ್ಷ್ಮ ಮನಸ್ಸಿನವಳು. ಒಬ್ಬಳೇ ಮಗಳು ಎಂಬ ಕಾರಣಕ್ಕೆ ಬಹಳ ಮುದ್ದಾಗಿ ಬೆಳೆಸಿದ್ದರು.

ಪ್ರತಿದಿನ ತಡವಾಗಿ ಏಳುತ್ತಿದ್ದುದರಿಂದ ಪುತ್ರಿ ನಿದ್ರೆಗೆ ತಂದೆ-ತಾಯಿ ಭಂಗ ತರುತ್ತಿರಲಿಲ್ಲ. ಎಂದಿನಂತೆ ಸೋಮವಾರ ಬೆಳಗ್ಗೆ ಶ್ರೀಧರ್ ರೆಡ್ಡಿ ಅವರು ಕೆಲಸಕ್ಕೆ ತೆರಳಿದ್ದಾರೆ. ಇತ್ತ ಮನೆಯಲ್ಲಿ ಮಗಳಿಗೆ ಉಪಾಹಾರ ಸಿದ್ಧಪಡಿಸಿದ ತಾಯಿ, ಗಂಟೆ 10.30 ಆದರೂ ಮಗಳು ಏಳದೆ ಹೋದಾಗ ಆಕೆಯನ್ನು ತಿಂಡಿಗೆ ಕರೆಯಲು ಕೋಣೆಗೆ ತೆರಳಿದ್ದಾರೆ. ಹಲವು ಬಾರಿ ಕೂಗಿದರೂ ಮಗಳಿಂದ ಪ್ರತಿಕ್ರಿಯೆ ಬಾರದೆ ಹೋದಾಗ ಅವರು, ಕಿಟಕಿ ತೆರೆದು ನೋಡಿದ್ದಾರೆ. ಆಗ ನೇಣಿನ ಕುಣಿಕೆಯಲ್ಲಿ ಮಗಳ ಮೃತದೇಹ ಕಂಡು ರಚಿತಾ ಆಘಾತಗೊಂಡಿದ್ದಾರೆ.

ಕೂಡಲೇ ತಮ್ಮ ಪತಿಗೆ ಕರೆ ಮಾಡಿ ಚಿನ್ನು (ಮಗಳು) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳು ಬದುಕಿಲ್ಲ ಅಂದ ಮೇಲೆ ನಾನು ಸಹ ಇರುವುದಿಲ್ಲ. ಚಿನ್ನು ಬಿಟ್ಟು ಬದುಕಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಮಗಳ ಸಾವಿನ ಸುದ್ದಿ ಬರ ಸಿಡಿಲು ಬಡಿದಂತೆ ವ್ಯಾಕುಲಗೊಂಡ ಶ್ರೀಧರ್ ಅವರು ತಕ್ಷಣವೇ ಮನೆಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಅ‍ವರ ಪತ್ನಿ ಸಹ ನೇಣಿಗೆ ಶರಣಾಗಿದ್ದರು. ಈ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಮಗಳ ಸಾವಿನಿಂದ ಆಘಾತಗೊಂಡು ರಚಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಶ್ರೀಜಾ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಐ ಆ್ಯಮ್ ಸಾರಿ... !!

‘ನೀನು ನನಗೆ ಬೆಸ್ಟ್‌ ಸೋಲ್ ಮೇಟ್‌. ಒಳ್ಳೆಯ ಹುಡುಗ ನೀನು. ಆ್ಯಮ್ ಸಾರಿ. ನಾನು ಬದುಕು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ’ ಎಂದು ಮೃತ ಶ್ರೀಜಾ ತನ್ನ ಪ್ರಿಯಕರನಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಮೃತಳ ಕೋಣೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಹಾಗೆಯೇ ತನ್ನ ಬಾಯ್ ಫ್ರೆಂಡ್ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

-ನಗರದ ನಾಗಗೊಂಡನಹಳ್ಳಿ ನಿವಾಸಿಗಳಾದ ಶ್ರೀಜಾ, ತಾಯಿ ರಚಿತಾ ದುರ್ದೈವಿಗಳು

-ಆಂಧ್ರ ಮೂಲದ ಖಾಸಗಿ ಕಂಪನಿ ಉದ್ಯೋಗಿ ಶ್ರೀಧರ್ ರೆಡ್ಡಿ, ಪುತ್ರಿ ಶ್ರೀಜಾ, ಪತ್ನಿ ರಚಿತಾ ನೆಲೆಸಿದ್ದರು

- ಸಾಫ್ಟ್‌ವೇರ್ ಕಂಪನಿಯಲ್ಲಿ ಶ್ರೀಜಾ ಉದ್ಯೋಗಿಯಾಗಿದ್ದು ಓಕೈಕ ಮುದ್ದಿನ ಮಗಳು

-ಪ್ರತಿದಿನ ಬೆಳಿಗ್ಗೆ ತಡವಾಗಿ ಏಳುತ್ತಿದ್ದುದರಿಂದ ಸೋಮವಾರವೂ ಮಗಳನ್ನು ಎಬ್ಬಿಸಲು ಹೋಗಿರಲಿಲ್ಲ

-ತಾಯಿ ತಿಂಡಿ ರೆಡಿ ಮಾಡಿ ಗಂಟೆ 10.30 ಆದರೂ ಮಗಳು ಏಳದಿದ್ದಾಗ ಕೋಣೆಗೆ ತೆರಳಿದ್ದಾರೆ.

- ಹಲವು ಸಲ ಕೂಗಿದರೂ ಪ್ರತಿಕ್ರಿಯಿಸಿಲ್ಲ, ಕಿಟಕಿಯಲ್ಲಿ ನೋಡಿದಾಗ ನೇಣಿನ ಕುಣಿಕೆಯಲ್ಲಿ ಮಗಳ ಮೃತದೇಹ ಕಂಡ ತಾಯಿಗೆ ಆಘಾತ

-ಕೂಡಲೆ ಪತಿಗೆ ಕರೆ ಮಾಡಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳಿಲ್ಲದ ಮೇಲೆ ನಾನೂ ಇರಲ್ಲ ಎಂದೇಳಿ ಕರೆ ಕಟ್‌ ಮಾಡಿದ್ದಾಳೆ

- ಮಗಳ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಶ್ರೀಧರ್ ತಕ್ಷಣವೇ ಮನೆಗೆ ಬಂದು ನೋಡುವಷ್ಟರಲ್ಲೇ ಪತ್ನಿಯೂ ನೇಣಿಗೆ ಶರಣು

Read more Articles on