ಸಾರಾಂಶ
ಹರಿಹರ: ವಿವಿಧ ಸಂಘಗಳಲ್ಲಿ ಮಾಡಿ, ಜಿಗುಪ್ಸೆಗೊಂಡು ತಾಯಿ ಮತ್ತು ವಿಕಲಚೇತನ ಮಗಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಗಂಗನರಸಿ ಗ್ರಾಮದ ವಾಸಿಗಳಾದ ಸುವರ್ಣಮ್ಮ (೫೬) ಇವರ ವಿಕಲಚೇತನ ಪುತ್ರಿ ಗೌರಮ್ಮ (೨೬) ಮೃತ ದುರ್ದೈವಿಗಳು.ವಿವರ: ಸುವರ್ಣಮ್ಮ ಮಗಳು ಗೌರಮ್ಮರೊಂದಿಗೆ ಜು.೧ಕ್ಕೆ ಹೂವಿನಹಡಗಲಿ ತಾಲೂಕಿನಲ್ಲಿರುವ ಮತ್ತೊಬ್ಬ ಪುತ್ರಿಯ ಮನೆಗೆ ತೆರಳಿದ್ದಾರೆ, ಅಲ್ಲೆರಡು ದಿನ ಇದ್ದು, ನಂತರ ಅದೇ ತಾಲೂಕಿನಲ್ಲಿರುವ ಇನ್ನೊಬ್ಬ ಮಗಳ ಮನೆಗೆ ತೆರಳಿದ್ದಾರೆ. ಅಲ್ಲಿಂದ ಗಂಗನರಸಿಗೆ ತೆರಳುವುದಾಗಿ ತಿಳಿಸಿ ಹೊರಟಿದ್ದರು. ಆದರೆ, ಇವರಿಬ್ಬರೂ ಹರಿಹರದ ನೀರು ಸರಬರಾಜು ಕೇಂದ್ರದ ಬಳಿಯ ಜೋಡು ಬಸವೇಶ್ವರ ದೇವಸ್ಥಾನದ ಬಳಿ ಇರುವುದನ್ನು ಜು.೬ಕ್ಕೆ ಗ್ರಾಮದ ಕೆಲವರು ಗಮನಿಸಿದ್ದಾರೆ.
ಮಕ್ಕಳ ಊರಿನಿಂದ ಬಂದವರು ನಾಲ್ಕು ದಿನಗಳ ಕಾಲ ಗಂಗನರಸಿಗೆ ಹೋಗದೆ ಹರಿಹರದಲ್ಲೆ ಇವರು ಸುತ್ತಾಡಿದ್ದಾರೆ ಎಂದು ಹೇಳಲಾಗಿದೆ.ಸಾಲದ ಹೊರೆ:
ಸುವರ್ಣಮ್ಮ ವಿಧವೆಯಾಗಿದ್ದು, ವಿಲಚೇತನ ಮಗಳನ್ನು ಸಾಕುವ ಹೊಣೆ ಇವರ ಮೇಲೆಯೆ ಇತ್ತು. ಜಮೀನಿಲ್ಲದ ಇವರು ಕೂಲಿ ಕೆಲಸ ಮಾಡುತ್ತ ಇರುವ ಸ್ವಂತ ಚಿಕ್ಕ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು.ಇವರು ಮೈಕ್ರೋ ಫೈನಾನ್ಸ್ ಸೇರಿ ಮೂರು ಸಂಘಗಳಲ್ಲಿ ೩ ಲಕ್ಷ ರು.ಗೂ ಅಧಿಕ ಸಾಲ ಪಡೆದಿದ್ದರು. ತಿಂಗಳಿಗೊಂದು ಕಂತನ್ನು ಮತ್ತೊಂದು ಸಂಘಕ್ಕೆ ಪಾವತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರ್ಥಿಕ ಸಂಕಷ್ಟದಿಂದಾಗಿ ಕಳೆದೆರಡು ವಾರಗಳಿಂದ ಸಂಘಗಳಿಗೆ ಕಂತನ್ನು ಪಾವತಿಸಿರಲಿಲ್ಲ, ಸಂಘದ ಸಿಬ್ಬಂದಿ ಕಂತಿನ ಹಣ ಪಾವತಿಸುವಂತೆ ಇವರಿಗೆ ದುಂಬಾಲು ಬಿದ್ದಿದ್ದರೆನ್ನಲಾಗಿದೆ. ಇದರಿಂದ ಬೇಸತ್ತು ಇವರು ಜು.1ರಂದು ಊರು ತೊರೆದಿದ್ದರು ಎಂದು ತಿಳಿದು ಬಂದಿದೆ.
ತಾವಿದ್ದ ಜೋಡು ಬಸವೇಶ್ವರ ದೇವಸ್ಥಾನದ ಪಕ್ಕದಲ್ಲೆ ಇರುವ ರೈಲು ಹಳಿಗಳ ಬಳಿ ತೆರಳಿ ದಾವಣಗೆರೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ರೈಲಿಗೆ ತಲೆಕೊಟ್ಟು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ದಾವಣಗೆರೆ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.