ಪ್ರತಿಷ್ಠಿತ ಡೊಮಿನಾಸ್ ಮಳಿಗೆಯೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ 19ಕ್ಕೂ ಹೆಚ್ಚು ವಿದ್ಯುತ್ ಚಾಲಿತ ಸ್ಕೂಟರ್‌ಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಗುರುವಾರ ನಡೆದಿದೆ.
ಬೆಂಗಳೂರು : ಪ್ರತಿಷ್ಠಿತ ಡೊಮಿನಾಸ್ ಮಳಿಗೆಯೊಂದರ ವಾಹನ ನಿಲುಗಡೆ ಪ್ರದೇಶದಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ 19ಕ್ಕೂ ಹೆಚ್ಚು ವಿದ್ಯುತ್ ಚಾಲಿತ ಸ್ಕೂಟರ್‌ಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಗುರುವಾರ ನಡೆದಿದೆ.
ಕನಕಪುರ ರಸ್ತೆಯ ಮಣಿಪಾಲ್ ಆಸ್ಪತ್ರೆ ಹತ್ತಿರದ ಡೊಮಿನಾಸ್ ಮಳಿಗೆಯ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ಕೆಳಹಂತದ ವಾಹನ ನಿಲುಗಡೆ ಪ್ರದೇಶದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌ಗಳು ಚಾರ್ಜಿಂಗ್ ಹಾಕಿದ್ದಾಗ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಕಿಡಿ ಹೊತ್ತಿಕೊಂಡಿದೆ. ಆಗ ವಾಹನ ನಿಲುಗಡೆ ಪ್ರದೇಶದಲ್ಲೇ ಇಟ್ಟಿದ್ದ ಗ್ಯಾಸ್ ಸಿಲಿಂಡರ್‌ಗೆ ಕಿಡಿ ತಾಕಿದ್ದರಿಂದ ಸಿಡಿದು ಬೆಂಕಿ ಜ್ವಾಲೆ ಧಗಧಗಿಸಿದೆ.
ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಿಬ್ಬಂದಿ ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ 19 ಸ್ಕೂಟರ್‌ಗಳು ಭಾಗಶಃ ಸುಟ್ಟು ಕರಕಲಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
