ಸಾರಾಂಶ
ಭೂ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್ ಗಾಯಕ ಲಕ್ಕಿ ಅಲಿ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರು : ಭೂ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್ ಗಾಯಕ ಲಕ್ಕಿ ಅಲಿ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದಾರೆ.
ನಗರದ ಯಲಹಂಕ ಉಪನಗರ ಬಳಿ ಲಕ್ಕಿ ಅಲಿ ಅವರ ಟ್ರಸ್ಟ್‌ಗೆ ಸಂಬಂಧಿಸಿದ ಭೂಮಿಯನ್ನು ರೋಹಿಣಿ ಕುಟುಂಬಸ್ಥರು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಕೆ ಮಾಡಲಾಗಿದೆ. ರೋಹಿಣಿ ಸಿಂಧೂರಿ ಕುಮ್ಮಕ್ಕಿನಿಂದ ಅವರ ಪತಿ ಸುಧೀರ್ ರೆಡ್ಡಿ, ಬಾಮೈದ ಮಧುಸೂಧನ್ ರೆಡ್ಡಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಲಕ್ಕಿ ಅಲಿ ಅವರು ಎಕ್ಸ್‌ನಲ್ಲಿ ದೂರಿನ ಪ್ರತಿಯನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಯಲಹಂಕ ಉಪನಗರ ಠಾಣೆಯ ಎಸಿಪಿ ಮಂಜುನಾಥ್, ತಾಲೂಕು ಸರ್ವೇ ಅಧಿಕಾರಿಯಾದ ಮನೋಹರ್ ಎಂಬುವರೂ ಸಹ ಹಗರಣದಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದ್ದಾರೆ.
ಯಲಹಂಕ ಉಪನಗರ ಬಳಿಯಿರುವ ತಮ್ಮ ಜಮೀನನ್ನು ಸುಧೀರ್ ರೆಡ್ಡಿ ಹಾಗೂ ಮಧುಸೂಧನ್ ರೆಡ್ಡಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿಗೆ ರೋಹಿಣಿ ಸಿಂಧೂರಿ ಸಹಕಾರ ಕೊಟ್ಟಿದ್ದು, ಆ ಮೂಲಕ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.