ಸಾರಾಂಶ
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ 2023ನೇ ಸಾಲಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಿಂದ ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಸರ್ಕಾರ ಜಮೀನು ಮಂಜೂರು ಮಾಡಿದ್ದ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು : ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ 2023ನೇ ಸಾಲಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಿಂದ ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಸರ್ಕಾರ ಜಮೀನು ಮಂಜೂರು ಮಾಡಿದ್ದ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ರನ್ಯಾ ‘ಕ್ಸಿರೋದಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ’ಗೆ ನಿರ್ದೇಶಕಿಯಾಗಿದ್ದಾರೆ. ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇಲ್ಲದೆ ಸರ್ಕಾರಿ ಜಮೀನು ಪಡೆಯುವುದು ಅಷ್ಟು ಸುಲಭವಲ್ಲ. ಅಂದರೆ, ರನ್ಯಾಗೆ ಪ್ರಭಾವಿ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಸಂಪರ್ಕ ಇರುವುದರಿಂದಲೇ ಕಂಪನಿಗೆ ಸರ್ಕಾರಿ ಜಮೀನು ಪಡೆಯಲು ಸಾಧ್ಯವಾಗಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಚಿನ್ನ ಕಳ್ಳಸಾಗಣೆ ಹಿಂದೆ ಈ ಪ್ರಭಾವಿ ರಾಜಕಾರಣಿಗಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಪ್ರಭಾವಿಗಳು ಯಾರೆಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
ಕೆಐಎಡಿಬಿ ಸ್ಪಷ್ಟನೆ:
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರನ್ಯಾ ರಾವ್ ಅವರ ಮೆಸರ್ಸ್ ಕ್ಸಿರೋದಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 12 ಎಕರೆ ಭೂಮಿ 2023ರ ಜನವರಿ 2ರಂದು ಮಂಜೂರಾಗಿದೆ. ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ, 2023ರ ಜನವರಿ 2ರಂದು ನಡೆದ 137ನೇ ರಾಜ್ಯಮಟ್ಟದ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಕಮಿಟಿ (ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ) ಸಭೆಯಲ್ಲಿ ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಈ ಭೂಮಿ ಮಂಜೂರಾತಿಗೆ ಈ ಅನುಮೋದನೆ ನೀಡಲಾಗಿದೆ.
ಉಕ್ಕಿನಿಂದ ತಯಾರಿಸಲಾಗುವ ಟಿಎಂಟಿ ಪಟ್ಟಿ, ಸರಳು ಹಾಗೂ ಸಹ-ಉತ್ಪನ್ನಗಳ ಘಟಕವನ್ನು 138 ಕೋಟಿ ರು. ಹೂಡಿಕೆಯಲ್ಲಿ ಸ್ಥಾಪಿಸಲಾಗುವುದು. ಇದರಿಂದ ಸುಮಾರು 160 ಉದ್ಯೋಗ ಸೃಷ್ಟಿಯಾಗಲಿವೆ ಎಂದು ಕಂಪನಿ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ ಕಂಪನಿಗೆ 12 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಕೆಐಎಡಿಬಿ ಸಿಇಒ ಡಾ.ಮಹೇಶ್ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.