ಅತ್ತೆ ಮನೆಯಲ್ಲೇ ಚಿನ್ನ ಕದ್ದ ಅಳಿಯ

| Published : Jul 13 2024, 01:33 AM IST / Updated: Jul 13 2024, 06:37 AM IST

ಸಾರಾಂಶ

ಅತ್ತೆ ಮನೆಯಲ್ಲಿ ಚಿನ್ನ ಕದ್ದ ಅಳಿಯನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಅತ್ತೆ ಮನೆಯಲ್ಲಿ ಚಿನ್ನ ಕದ್ದ ಅಳಿಯನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುರುಬರಹಳ್ಳಿಯ ಪರಶುರಾಮ್‌(29) ಬಂಧಿತ. ಆರೋಪಿಯಿಂದ ₹3.80 ಲಕ್ಷ ಮೌಲ್ಯದ 70 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಜು.2ರಂದು ಲಗ್ಗೆರೆ ರಾಜೀವ್‌ಗಾಂಧಿನಗರ ನಿವಾಸಿ ಸುವರ್ಣಮ್ಮ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಜು.2ರಂದು ದೂರುದಾರೆ ಸುವರ್ಣಮ್ಮ ಅವರ ಹುಟ್ಟುಹಬ್ಬವಿದ್ದ ಹಿನ್ನೆಲೆಯಲ್ಲಿ ಹಿರಿಯ ಮಗಳು ರೇಣುಕಾ ಮತ್ತು ಅಳಿಯ ಪರಶುರಾಮ್‌ ಮನೆಗೆ ಬಂದಿದ್ದರು. ಬೆಳಗ್ಗೆ ಸುಮಾರು 10.45ಕ್ಕೆ ದೇವಸ್ಥಾನಕ್ಕೆ ತೆರಳುವಾಗ ಸುವರ್ಣಮ್ಮ ಮನೆಗೆ ಬೀಗ ಹಾಕಿದ್ದರು. ಈ ವೇಳೆ ಜತೆಯಲ್ಲೇ ಇದ್ದ ಮಗಳು ರೇಣುಕಾ ತಮ್ಮ ಬಳಿಯೇ ಬೀಗ ಕೀ ಇರಿಸಿಕೊಂಡಿದ್ದರು. ಈ ವೇಳೆ ಪರಶುರಾಮ್‌ ಪತ್ನಿಗೆ ಗೊತ್ತಾಗದಂತೆ ಮನೆಯ ಬೀಗ ಕೀ ತೆಗೆದುಕೊಂಡಿದ್ದಾನೆ.

ಪತ್ನಿ ಬ್ಯಾಗ್‌ನಿಂದ ಕೀ ಕದ್ದ:

ಇತ್ತ ಪತ್ನಿ ಮತ್ತು ಅತ್ತೆ ದೇವಸ್ಥಾನಕ್ಕೆ ಹೋಗುತ್ತಿದ್ದಂತೆ ಪರಶುರಾಮ್‌ ಮನೆ ಬೀಗ ತೆರೆದು ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಮನೆಗೆ ಬೀಗ ಹಾಕಿಕೊಂಡು ದೇವಸ್ಥಾನಕ್ಕೆ ತೆರಳಿದ್ದಾನೆ. ಬಳಿಕ ಬೀಗದ ಕೀಯನ್ನು ಪತ್ನಿ ರೇಣುಕಾ ಬ್ಯಾಗ್‌ಗೆ ಇರಿಸಿದ್ದಾನೆ. ಬೆಳಗ್ಗೆ 11.45ಕ್ಕೆ ದೇವಸ್ಥಾನದಿಂದ ಮನೆಗೆ ವಾಪಾಸ್‌ ಬರಲಾಗಿದೆ. ಈ ವೇಳೆ ರೇಣುಕಾ ಹಾಗೂ ಪರಶುರಾಮ್‌, ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಬೇಕು ಎಂದು ಕುರುಬರಹಳ್ಳಿಗೆ ತೆರಳಿದ್ದಾರೆ.

ಮಧ್ಯಾಹ್ನ ಬೀರು ತೆರೆದಾಗ ಕಳವು ಬೆಳಕಿಗೆ:

ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ ಸುವರ್ಣಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿನ್ನಾಭರಣ ಧರಿಸಲು ಬೀರು ತೆರೆದು ನೋಡಿದಾಗ ಚಿನ್ನಾಭರಣ ಇಲ್ಲದಿರುವುದು ಕಂಡು ಬಂದಿದೆ. ಬಳಿಕ ದೇವಸ್ಥಾನಕ್ಕೆ ಹೋಗುವಾಗ ಮಗಳ ಬಳಿ ಮನೆ ಬೀಗದ ಕೀ ಇದುದ್ದರಿಂದ ಆಕೆಯ ಬಗ್ಗೆ ಅನುಮಾನಗೊಂಡು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ರೇಣುಕಾ ಮತ್ತು ಪರಶುರಾಮ್‌ನನ್ನು ಕರೆಸಿ ವಿಚಾರಣೆ ಮಾಡಿದಾಗ, ಪರಶುರಾಮ್‌ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ, ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.