ರಾಡಿಂದ ಹೊಡೆದು ಹೆತ್ತ ತಾಯಿಯಕೊಂದ ಪುತ್ರ ಪೊಲೀಸರಿಗೆ ಶರಣು

| Published : Feb 03 2024, 01:46 AM IST

ರಾಡಿಂದ ಹೊಡೆದು ಹೆತ್ತ ತಾಯಿಯಕೊಂದ ಪುತ್ರ ಪೊಲೀಸರಿಗೆ ಶರಣು
Share this Article
  • FB
  • TW
  • Linkdin
  • Email

ಸಾರಾಂಶ

ತಿಂಡಿ ಮಾಡುವ ವಿಚಾರಕ್ಕೆ ಜಗಳ ತೆಗೆದ ಮಗ ತಾಯಿಯನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್‌.ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ತಾಯಿಯನ್ನು ಹತ್ಯೆಗೈದು ಪೊಲೀಸ್ ಠಾಣೆಗೆ ಅಪ್ರಾಪ್ತ ಬಾಲಕನೊಬ್ಬ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ.

ಕೆ.ಆರ್‌.ಪುರದ ಭೀಮಯ್ಯ ಲೇಔಟ್ ನಿವಾಸಿ ನೇತ್ರಾವತಿ (40) ಹತ್ಯೆಯಾದ ದುರ್ದೈವಿ. ಈ ಕೊಲೆ ಪ್ರಕರಣ ಸಂಬಂಧ ಮೃತಳ ಅಪ್ರಾಪ್ತ ಪುತ್ರನನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ವಿಚಾರವಾಗಿ ತಾಯಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾಗಿ ಬಾಲಕ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ತಮ್ಮ ಇಬ್ಬರು ಮಕ್ಕಳ ಜತೆ ನೇತ್ರಾವತಿ ಹಾಗೂ ಕೃಷಿಕ ಚಂದ್ರಪ್ಪ ದಂಪತಿ ನೆಲೆಸಿದ್ದರು. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಒಂದೂವರೆ ಎಕರೆಯಲ್ಲಿ ಚಂದ್ರಪ್ಪ ಕೃಷಿ ಮಾಡುತ್ತಿದ್ದು, ಕೆ.ಆರ್‌.ಪುರದ ಭೀಮಯ್ಯ ಲೇಔಟ್‌ನಲ್ಲಿ ಏಳೆಂಟು ಮನೆಗಳನ್ನು ಕಟ್ಟಿಸಿ ಅವರು ಬಾಡಿಗೆ ನೀಡಿದ್ದಾರೆ. ಚಂದ್ರಪ್ಪ ದಂಪತಿ ಇಬ್ಬರ ಮಕ್ಕಳ ಪೈಕಿ ಮಗ ಡಿಪ್ಲೋಮಾ ಓದುತ್ತಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಮೃತ ನೇತ್ರಾವತಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಿಂಡಿ ವಿಚಾರವಾಗಿ ಗಲಾಟೆ?

ಪ್ರತಿ ದಿನ ಬೆಳಗ್ಗೆ ಮುಳಬಾಗಿಲ ತೋಟಕ್ಕೆ ಹೋಗಿ ಸಂಜೆ ಚಂದ್ರಪ್ಪ ಮರಳುತ್ತಿದ್ದರು. ಎಂದಿನಂತೆ ಶುಕ್ರವಾರ ಸಹ ಬೆಳಗ್ಗೆ 5 ಗಂಟೆಗೆ ಅವರು ತೆರಳಿದ್ದರು. ಬಳಿಕ ಮನೆಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ತಿಂಡಿ ಮಾಡಿಕೊಡುವ ವಿಚಾರವಾಗಿ ನೇತ್ರಾವತಿ ಜತೆ ಅವರ ಪುತ್ರ ಜಗಳ ಮಾಡಿದ್ದಾನೆ. ಆಗ ಕೋಪಗೊಂಡು ತಾಯಿ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಂದು ಬಳಿಕ ಕೆ.ಆರ್‌.ಪುರ ಠಾಣೆಗೆ ತೆರಳಿ ಆತ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಹತ್ಯೆಯ ಬಗ್ಗೆ ಶಂಕೆ:

ನೇತ್ರಾವತಿ ಹತ್ಯೆ ಪ್ರಕರಣ ಸಂಬಂಧ ಮೃತಳ ಪತಿ ಚಂದ್ರಪ್ಪ ಅವರನ್ನು ಸಹ ಕೆ.ಆರ್‌.ಪುರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಕೊಲೆಯಲ್ಲಿ ಮೃತನ ಪುತ್ರನ ಮೇಲೆ ಆರೋಪವಿದೆ. ಆದರೆ ತಿಂಡಿ ಮಾಡಿಕೊಡುವ ಕ್ಷುಲ್ಲಕ ಕಾರಣಕ್ಕೆ ತಾಯಿ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತರ ಪತ್ನಿಯನ್ನು ಸಹ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.