ಸಾರಾಂಶ
ತಾಲೂಕಿನ ರುದ್ರಾಕ್ಷಿಪುರ ಸಮೀಪದ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮದ್ದೂರು : ತಾಲೂಕಿನ ರುದ್ರಾಕ್ಷಿಪುರ ಸಮೀಪದ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಅಪಘಾತ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಪತ್ತೆಗೆ ಅಳವಡಿಸಿದ್ದ ಎ.ಎನ್.ಪಿ.ಆರ್. ಕ್ಯಾಮೆರಾದ ಕಂಬ ಜಖಂ ಗೊಂಡಿದ್ದ ಹಿನ್ನೆಲೆಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಪಿಐ ಶಿವಕುಮಾರ್, ಸಂಚಾರಿ ಠಾಣೆ ಪಿಎಸ್ಐ ಮಹೇಶ್, ಮದ್ದೂರು ಠಾಣೆ ಪಿಎಸ್ಐ ಮಂಜುನಾಥ ಅವರುಗಳೊಂದಿಗೆ ಅಪಘಾತ ಸ್ಥಳ ವೀಕ್ಷಣೆ ಮಾಡಿದರು.
ಅಪಘಾತದಲ್ಲಿ ಬೆಂಗಳೂರಿನ ಬಗಲಗುಂಟೆ ನಿವಾಸಿ ಲೇಟ್ ಪ್ರಕಾಶ್ ಪತ್ನಿ ಕಲಾ ಹಾಗೂ ಈಕೆಯ ಪುತ್ರ ದರ್ಶನ್ ಸ್ಥಳದಲ್ಲೇ ಮೃತಪಟ್ಟು, ಮಗಳು ಮೇಘ ಮತ್ತು ಕಾರು ಚಾಲನೆ ಮಾಡುತ್ತಿದ್ದ ಅಳಿಯ ಮಂಜುನಾಥ್ ಗಾಯಗೊಂಡಿದ್ದರು. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಕಲಾ ಹಾಗೂ ದರ್ಶನ್ ಅವರ ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ವಾಸುದಾರರ ವಶಕ್ಕೆ ಒಪ್ಪಿಸಲಾಯಿತು.
ಕುಡಿದ ಅಮಲಿನಲ್ಲಿ ಹಲ್ಲೆ ಮೂವರು ಆರೋಪಿಗಳ ಬಂಧನ
ಕಿಕ್ಕೇರಿ: ಕುಂದೂರು ಗ್ರಾಮದ ಬಳಿ ಕುಡಿದ ಅಮಲಿನಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಅಣೆಚಾಕನಹಳ್ಳಿ ಸುದೀಪ, ಗಂಗನಹಳ್ಳಿ ನಾಗರಾಜು, ಕುಂದೂರು ಗ್ರಾಮದ ಲಕ್ಷ್ಮಣ ಬಂಧಿತರು. ದೊಡ್ಡಸೋಮನಹಳ್ಳಿ ಗ್ರಾಮದ ಕುಮಾರ್ ಹಾಗೂ ಈತನ ಭಾಮೈದ ಬೋರಲಿಂಗಯ್ಯ ಆರೋಪಿಗಳಿಂದ ಹಲ್ಲೆಗಳಗಾದವರು.ಕಳೆದ ವಾರ ಕುಮಾರ್, ಬೋರಲಿಂಗಯ್ಯ ತನ್ನ ಸ್ನೇಹಿತರು ಹರಿಯಾಲದಮ್ಮಗುಡಿ ಬಳಿ ಬರಲು ತಿಳಿಸಿದ ಕಾರಣ ರಾತ್ರಿ ವೇಳೆ ಬೈಕ್‌ನಲ್ಲಿ ದೊಡ್ಡಸೋಮನಹಳ್ಳಿ ಗ್ರಾಮದಿಂದ ತೆರಳುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆಗಾಗಿ ಕುಂದೂರು ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಅಲ್ಲೆ ಮದ್ಯಪಾನ ಮಾಡುತ್ತಿದ್ದ ಮೂವರು ಆರೋಪಿಗಳು ಅಮಲಿನಲ್ಲಿ ಗಲಾಟೆ ಮಾಡಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಹಲ್ಲೆಗೊಳಗಾಗಿ ಅರೆಪ್ರಜ್ಞೆ ಸ್ಥಿತಿಯಲ್ಲಿದ್ದ ಇವರನ್ನು ಪರಿಚಯಸ್ಥರು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಇನ್‌ಸ್ಪೆಕ್ಟರ್ ರೇವತಿ ಸಿಬ್ಬಂದಿಯೊಂದಿಗೆ ಆರೋಪಿಗಳ ಮಾಹಿತಿ ಕಲೆ ಹಾಕಲು ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಮೂವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ರೇವತಿ, ಸಿಬ್ಬಂದಿ ವಿನೋದ್, ಕುಮಾರ್ ಇದ್ದರು.