ವಿಶ್ವದ ಕುಖ್ಯಾತ ಪೇಟೆಗಳಲ್ಲಿ ಎಸ್‌ಪಿ ರೋಡ್‌ ಮಾರುಕಟ್ಟೆ!

| Published : Jan 31 2024, 02:22 AM IST / Updated: Jan 31 2024, 11:45 AM IST

SP Road Market

ಸಾರಾಂಶ

ವಿಶ್ವದ ಕುಖ್ಯಾತ ಪೇಟೆಗಳಲ್ಲಿ ಎಸ್‌ಪಿ ರೋಡ್‌ ಮಾರುಕಟ್ಟೆ! ಈ ಪೇಟೆಯಲ್ಲಿ ಕೃತಿಚೌರ್ಯ, ನಕಲಿ ಟ್ರೇಡ್‌ಮಾರ್ಕ್‌ ಕಾರುಬಾರು. ನಕಲಿ ಜಾಲದಿಂದ ನಮ್ಮ ಉದ್ಯಮಕ್ಕೆ ಭಾರಿ ನಷ್ಟ: ಅಮೆರಿಕ ವರದಿ

ಪಿಟಿಐ ವಾಷಿಂಗ್ಟನ್‌/ ನವದೆಹಲಿ

ಅಮೆರಿಕ ವ್ಯಾಪಾರ ಪ್ರತಿನಿಧಿಗಳ ‘ವಾರ್ಷಿಕ ಕುಖ್ಯಾತ ಮಾರುಕಟ್ಟೆ’ ಪಟ್ಟಿಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿಗೆ ಹೆಸರುವಾಸಿಯಾದ ಬೆಂಗಳೂರಿನ ಎಸ್‌ಪಿ ರೋಡ್‌ ಮಾರುಕಟ್ಟೆ ಸೇರಿ ಭಾರತದ 3 ಮಾರುಕಟ್ಟೆಗಳು ಹಾಗೂ 3 ಆನ್‌ಲೈನ್‌ ಮಾರುಕಟ್ಟೆಗಳು ಸ್ಥಾನ ಪಡೆದಿವೆ. ಇದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.

2023 ರ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯು 39 ಆನ್‌ಲೈನ್ ಮಾರುಕಟ್ಟೆಗಳು ಮತ್ತು 33 ಭೌತಿಕ ಮಾರುಕಟ್ಟೆಗಳನ್ನು ವಿಶ್ಲೇಷಿಸಿದೆ. 

ಪಟ್ಟಿಯಲ್ಲಿರುವ ಭಾರತದ 3 ಭೌತಿಕ ಮಾರುಕಟ್ಟೆಗಳಲ್ಲಿ ಮುಂಬೈನ ಹೀರಾ ಪನ್ನಾ ಮಾರುಕಟ್ಟೆ, ನವದೆಹಲಿಯ ಕರೋಲ್ ಬಾಗ್‌ನ ಟ್ಯಾಂಕ್ ರೋಡ್ ಮಾರುಕಟ್ಟೆ ಮತ್ತು ಬೆಂಗಳೂರಿನ ಸಾದರ್ ಪತ್ರಪ್ಪ ರಸ್ತೆ (ಎಸ್‌ಪಿ ರೋಡ್‌) ಮಾರುಕಟ್ಟೆ ಇವೆ. 

ಇನ್ನು ಪಟ್ಟಿಯಲ್ಲಿರುವ ಆನ್‌ಲೈನ್ ಭಾರತೀಯ ಮಾರುಕಟ್ಟೆಗಳಲ್ಲಿ ಇಂಡಿಯಾ ಮಾರ್ಟ್, ವೆಗಾಮೊವೀಸ್ ಮತ್ತು ಡಬ್ಲ್ಯುಎಚ್‌ಎಂಸಿಎಸ್ ಸ್ಮಾರ್ಟರ್ಸ್ ಸೇರಿವೆ.

ಏಕೆ ಈ ಮಾರುಕಟ್ಟೆಗಳು ಕುಖ್ಯಾತ?
ಈ ಮಾರುಕಟ್ಟೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಟ್ರೇಡ್‌ಮಾರ್ಕ್ ನಕಲಿ ಜಾಲಗಳಿವೆ ಹಾಗೂ ಕಾಪಿರೈಟ್‌ ಉಲ್ಲಂಘನೆ ಮಾಡಿರುವ ಉತ್ಪನ್ನಗಳ ಮಾರಾಟ ಹೇರಳವಾಗಿ ನಡೆಯುತ್ತದೆ. 

ಇಂಥ ನಕಲಿ ಮತ್ತು ಕಳ್ಳ ಸರಕುಗಳ ವ್ಯಾಪಾರವು ಕಾರ್ಮಿಕರು, ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಹಾನಿ ಮಾಡುತ್ತದೆ ಮತ್ತು ಅಂತಿಮವಾಗಿ ಅಮೆರಿಕ ಆರ್ಥಿಕತೆಗೆ ಹಾನಿ ಮಾಡುತ್ತದೆ ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಹೇಳಿದ್ದಾರೆ.

ಎಸ್‌ಪಿ ರೋಡ್‌ ಬಗ್ಗೆ ಅಮೆರಿಕ ಹೇಳಿದ್ದೇನು?:
ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿರುವ ಸಾದರ್ ಪತ್ರಪ್ಪ ರಸ್ತೆ ಅಥವಾ ಎಸ್‌ಪಿ ರಸ್ತೆ ಎಲೆಕ್ಟ್ರಾನಿಕ್, ಹಾರ್ಡ್‌ವೇರ್ ಮತ್ತು ಮೆಷಿನ್ ಟೂಲ್ ಸರಕುಗಳ ಹಬ್ ಎಂದು ಕರೆಯಲ್ಪಡುತ್ತದೆ ಮತ್ತು ಅದರೆ ನಕಲಿ ಉತ್ಪನ್ನಗಳಿಗೆ ಅಷ್ಟೇ ಕುಖ್ಯಾತವಾಗಿದೆ ಎಂದು ಅಮೆರಿಕ ಹೇಳಿದೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ಬೆಂಗಳೂರಿನ ಕೆಆರ್ ಮಾರುಕಟ್ಟೆಯ ವ್ಯಾಪಾರಿಯೊಬ್ಬರು ಮಾತನಾಡಿ, ‘ಎಸ್‌ಪಿ ರೋಡ್ ಅಮೆರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದರಲ್ಲಿ ಆಶ್ಚರ್ಯವಿಲ್ಲ. 

ಏಕೆಂದರೆ ಇದು ನಕಲಿ ಉತ್ಪನ್ನಗಳ ದೊಡ್ಡ ಮಾರುಕಟ್ಟೆಯಾಗಿದೆ. ಆದರೆ ಇಲ್ಲಿ ಕೆಲವು ಅಸಲಿ ಅಂಗಡಿಗಳು ಸಹ ಇವೆ’ ಎಂದರು.

‘ಆದಾಗ್ಯೂ ಎಲ್ಲಾ ನಕಲಿ ‘ಚೀನೀ ಸರಕುಗಳನ್ನು’ ಇಲ್ಲಿ ಸುರಿಯಲಾಗುತ್ತದೆ, ಅದು ದೇಶದ ವಿವಿಧ ಭಾಗಗಳಿಗೆ ಹೋಗುತ್ತದೆ’ ಎಂದು ಅವರು ಎಸ್‌ಪಿ ರೋಡ್‌ ಪೇಟೆಯ ಬಗ್ಗೆ ಹೇಳಿದರು.