ಅತಿ ವೇಗದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ: ಪ್ರಯಾಣಿಕನ ಸಾವು

| Published : Sep 29 2025, 03:02 AM IST

ಅತಿ ವೇಗದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ: ಪ್ರಯಾಣಿಕನ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಅತಿವೇಗವಾಗಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಯಾಣಿಕ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅತಿವೇಗವಾಗಿ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರಯಾಣಿಕ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಳಿಮಾವು ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೇಗೂರು ನಿವಾಸಿ ಶ್ರೀನಿವಾಸ (34) ಮೃತ ದುರ್ದೈವಿ. ಕಾರು ಚಾಲಕ ದೀಪಕ್‌ (31) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶನಿವಾರ ತಡರಾತ್ರಿ ಸುಮಾರು 12.30ಕ್ಕೆ ಅಕ್ಷಯನಗರ-ಎಲೇನಹಳ್ಳಿ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ಮೃತ ಶ್ರೀನಿವಾಸ್‌ ಮತ್ತು ದೀಪಕ್‌ ಸ್ನೇಹಿತರಾಗಿದ್ದು, ರಾತ್ರಿ ಕಾರಿನಲ್ಲಿ ಅಕ್ಷಯನಗರದ ಕಡೆಯಿಂದ ಎಲೇನಹಳ್ಳಿ ಕಡೆಗೆ ತೆರಳುತ್ತಿದ್ದರು. ದೀಪಕ್‌ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ಪಾದಚಾರಿ ಮಾರ್ಗದ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಾಲಕ ದೀಪಕ್‌ ಹಾಗೂ ಪಕ್ಕದ ಆಸನದಲ್ಲಿ ಕುಳಿತಿದ್ದ ಶ್ರೀನಿವಾಸ್‌ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಪರಿಣಾಮ ಭಾನುವಾರ ಮುಂಜಾನೆ ಚಿಕಿತ್ಸೆ ಫಲಿಸದೆ ಶ್ರೀನಿವಾಸ್‌ ಮೃತಪಟ್ಟಿದ್ದಾನೆ. ಚಾಲಕ ದೀಪಕ್‌ಗೆ ಚಿಕಿತ್ಸೆ ಮುಂದುವರಿದಿದೆ.

ಅಪಘಾತಕ್ಕೆ ಒಳಗಾಗಿರುವ ಕಾರಿಗೆ ವಿಮೆ ಹಾಗೂ ಸದೃಢತೆಯ ಪ್ರಮಾಣ ಪತ್ರ(ಎಫ್‌ಸಿ) ಇಲ್ಲದಿರುವುದು ಕಂಡು ಬಂದಿದೆ. ಈ ಸಂಬಂಧ ಕಾರು ಚಾಲಕ ದೀಪಕ್‌ ವಿರುದ್ಧ ಹುಳಿಮಾವು ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿಗೆ ವಿಮೆ, ಎಫ್‌ಸಿ ಇಲ್ಲ: ಪರಿಹಾರ ಸಿಗಲ್ಲ

ಅಪಘಾತಕ್ಕೆ ಒಳಗಾಗಿರುವ ಕಾರಿಗೆ ವಿಮೆ ಹಾಗೂ ಎಫ್‌ಸಿ ಇಲ್ಲ. ಹೀಗಾಗಿ ಮೃತ ಶ್ರೀನಿವಾಸ್‌ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗುವುದಿಲ್ಲ. ಮೃತ ಶ್ರೀನಿವಾಸ್‌ಗೆ ವೃದ್ಧ ತಂದೆ-ತಾಯಿ ಇದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಶ್ರೀನಿವಾಸ್‌ ಅಕಾಲಿಕ ಸಾವಿನಿಂದ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸವಾರರು ತಮ್ಮ ವಾಹನಗಳಿಗೆ ವಿಮೆ, ಎಫ್‌ಸಿ ಮಾಡಿಸಿಕೊಳ್ಳಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.