ಸಾರಾಂಶ
ಹಣ ಉಳಿಸಲೆಂದು ಪುದುಚೇರಿಯಲ್ಲಿ ಕಾರು ನೋಂದಣಿ ಮಾಡಿಸಿ, ಸರ್ಕಾರಕ್ಕೆ ತೆರಿಗೆ ಕಟ್ಟದ ಆರೋಪ ನಾಗಠಾಣ ಮೀಸಲು ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ವಿರುದ್ಧ ಕೇಳಿ ಬಂದಿದೆ. ಅಧಿಕೃತವಾಗಿ ಫಲಕ ಹಾಕಿಕೊಂಡು ಬಳಸುತ್ತಿರುವ ಕಾರು ಪುದುಚೇರಿಯ ವಿಲ್ಲೈನೂರ್ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ.
ವಿಜಯಪುರ : ಹಣ ಉಳಿಸಲೆಂದು ಪುದುಚೇರಿಯಲ್ಲಿ ಕಾರು ನೋಂದಣಿ ಮಾಡಿಸಿ, ಸರ್ಕಾರಕ್ಕೆ ತೆರಿಗೆ ಕಟ್ಟದ ಆರೋಪ ನಾಗಠಾಣ ಮೀಸಲು ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ವಿರುದ್ಧ ಕೇಳಿ ಬಂದಿದೆ.
ಶಾಸಕ ವಿಠ್ಠಲ ಕಟಕದೊಂಡ ಅವರು ಅಧಿಕೃತವಾಗಿ ಫಲಕ ಹಾಕಿಕೊಂಡು ಬಳಸುತ್ತಿರುವ ಕಾರು ಪುದುಚೇರಿಯ ವಿಲ್ಲೈನೂರ್ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದೆ. 2024 ಜುಲೈ 17ರಂದು ಖರೀದಿಸಿರುವ PY05 VE9836 ನೋಂದಣಿ ಸಂಖ್ಯೆಯುಳ್ಳ ಇನ್ನೋವಾ ಕ್ರಿಸ್ಟಾ ಕಾರು, ಕಟಕದೊಂಡ ಕುಟುಂಬದವರ ಹೆಸರಿನಲ್ಲಿದೆ. ಇದರ ಮೊದಲ ಮಾಲೀಕರು ಸಹ ಇವರ ಕುಟುಂಬದವರೇ ಆಗಿದ್ದಾರೆ. ಈ ಮೂಲಕ ಸಾರಿಗೆ ಇಲಾಖೆ ಹಾಗೂ ವಾಹನ ಖರೀದಿ ಮೂಲಕ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ತೆರಿಗೆ ನಷ್ಟ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಕರ್ನಾಟಕ ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆಯಾಗಿದೆ ಎಂಬುದು ಆರೋಪ.
ಕಾಂಗ್ರೆಸ್ ಶಾಸಕ ವಿಠ್ಠಲ ಕಟಕದೊಂಡ ವಿಜಯಪುರದಲ್ಲಿ ನೆಲೆಸಿ, ಅಂತಾರಾಜ್ಯಕ್ಕೆ ತೆರಿಗೆ ಕಟ್ಟಿದ್ದಾರೆ. ಇಲ್ಲಿ ನೆಲೆಸಿದ್ದು, ಅಲ್ಲಿನ ನಿವಾಸಿ ಎಂದು ಹೇಗೆ ಕಾರು ಖರೀದಿಸಿದರು ಎಂಬ ಗೊಂದಲ ಜನರಲ್ಲಿದೆ. ಜೊತೆಗೆ ಪುದುಚೇರಿ ನೋಂದಣಿ ಹೊಂದಿರುವ ಕಾರಿಗೆ ವಿಧಾನಸೌಧದಲ್ಲಿ ಎಂಟ್ರಿ ಮಾಡಿಕೊಂಡು ಶಾಸಕರ ಕಚೇರಿ ಪಾಸ್ ಹೇಗೆ ನೀಡಲಾಗಿದೆ ಎಂಬ ಗೊಂದಲವೂ ಮೂಡಿದೆ.
ವಿಜಯಪುರದಲ್ಲಿ ಪುದುಚೇರಿ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಹೊರರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳನ್ನು ಆರ್‌ಟಿಒ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡುವ ಕಾರ್ಯ ಕೈಗೊಂಡಿದ್ದಾರೆ. ಹೀಗಾಗಿ ಶಾಸಕ ವಿಠ್ಠಲ ಕಟಕದೊಂಡ ಅವರ ಕಾರು ಕೂಡ ಸೀಜ್ ಮಾಡುವರೆ ಎಂಬ ಪ್ರಶ್ನೆ ಈಗ ಎದುರಾಗಿದೆ.