ಸಾರಾಂಶ
ನೊಯ್ಡಾ : ದೇಶದಲ್ಲಿ ಜಿಎಸ್‌ಟಿ ಸುಧಾರಣೆಗಳು ಮುಂದುವರಿಯಲಿದ್ದು, ಆರ್ಥಿಕತೆ ಹೆಚ್ಚು ಬಲಗೊಂಡಂತೆ ನಾಗರಿಕರ ಮೇಲಿನ ತೆರಿಗೆ ಹೊರೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ನೊಯ್ಡಾದಲ್ಲಿ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಕಾರ್ಯಕ್ರಮ 2025ರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ‘ಜಿಎಸ್‌ಟಿ ಸುಧಾರಣೆಗಳು ದೇಶದ ಬೆಳವಣಿಗೆಗೆ ಹೊಸ ರೆಕ್ಕೆಗಳನ್ನು ನೀಡಲಿವೆ. 12 ಲಕ್ಷ ರು.ಗಳವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿದ್ದು ಮತ್ತು ಹೊಸ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತಂದಿದ್ದರಿಂದ ನಾಗರಿಕರಿಗೆ
ವಾರ್ಷಿಕ 2.5 ಲಕ್ಷ ರು. ಉಳಿತಾಯವಾಗಲಿದೆ’ ಎಂದರು.
‘ಇಂದು ದೇಶ ಜಿಎಸ್‌ಟಿ ಉಳಿತಾಯ ಉತ್ಸವವನ್ನು ಆಚರಿಸುತ್ತಿದೆ. ನಾವು ಇಲ್ಲಿಗೆ ನಿಲ್ಲುವುದಿಲ್ಲ. ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತೇವೆ. ಆರ್ಥಿಕತೆಯು ಬೆಳೆಯುತ್ತಲೇ ಇರುವುದರಿಂದ, ತೆರಿಗೆ ಹೊರೆ ಕಡಿಮೆಯಾಗುತ್ತಲೇ ಇರುತ್ತದೆ. ನಾಗರಿಕರ ಆಶೀರ್ವಾದದೊಂದಿಗೆ, ಜಿಎಸ್‌ಟಿಯಲ್ಲಿನ ಸುಧಾರಣೆಗಳು ಮುಂದುವರಿಯುತ್ತವೆ’ ಎಂದು ಭರವಸೆ ನೀಡಿದ್ದಾರೆ.