ಸಾರಾಂಶ
ಅನ್ನದಾನೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶಿವಾನಂದ ಸ್ವಾಮೀಜಿ (90) ಕೊಲೆಯಾದವರು. ಮಠದ ಕೊಠಡಿಯಲ್ಲಿರುವ ಮಂಚದ ಮೇಲೆ ರಕ್ತಸಿಕ್ತವಾಗಿದ್ದ ಶ್ರೀಗಳ ಶವ ಪತ್ತೆಯಾಗಿದೆ.
ಮೈಸೂರು : ಹಿರಿಯ ಸ್ವಾಮೀಜಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನ ಸಿದ್ದಾರ್ಥ ನಗರದ ಶ್ರೀಅನ್ನದಾನೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಸೋಮವಾರ ನಡೆದಿದೆ.
ಅನ್ನದಾನೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶಿವಾನಂದ ಸ್ವಾಮೀಜಿ (90) ಕೊಲೆಯಾದವರು. ಮಠದ ಕೊಠಡಿಯಲ್ಲಿರುವ ಮಂಚದ ಮೇಲೆ ರಕ್ತಸಿಕ್ತವಾಗಿದ್ದ ಶ್ರೀಗಳ ಶವ ಪತ್ತೆಯಾಗಿದೆ. ಶವದ ಬಳಿಯೇ ಶ್ರೀಗಳ ಆಪ್ತ ಸಹಾಯಕ ರವಿ (61) ಮದ್ಯದ ಆಮಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ತಕ್ಷಣ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀಗಳನ್ನು ಮದ್ಯದೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಟಿ.ನರಸೀಪುರದ ಒಕ್ಕಲಗೇರೆಯ ನಿವಾಸಿ ರವಿ ಕೊಲೆ ಮಾಡಿದ್ದಾರೆ ಎಂದು ಶ್ರೀಗಳ ಸಂಬಂಧಿ ದುಶ್ಯಂತ್ (ವರಸೆಯಲ್ಲಿ ಮೊಮ್ಮಗ) ದೂರು ನೀಡಿದ್ದಾರೆ.
ರವಿ ಕಳೆದ 3 ವರ್ಷಗಳಿಂದ ಶ್ರೀಗಳ ಆಪ್ತ ಸಹಾಯಕನಾಗಿ, ಭದ್ರತಾ ಸಿಬ್ಬಂದಿಯಾಗಿ ಮಠದಲ್ಲಿ ಕೆಲಸ ಮಾಡಿಕೊಂಡಿದ್ದ. ಸೋಮವಾರ ಬೆಳಗ್ಗೆ ಶ್ರೀಗಳ ಮೊಮ್ಮಗ ದುಶ್ಯಂತ್, ಊಟ ತೆಗೆದುಕೊಂಡು ಹೋಗಲು ಎಂದಿನಂತೆ ರವಿ ತಮ್ಮ ಮನೆಗೆ ಬರದಿದ್ದಾಗ ಊಟದೊಂದಿಗೆ ಮಠಕ್ಕೆ ತೆರಳಿದ್ದಾರೆ. ಮಠದ ಕೊಠಡಿಯ ಮಂಚದಲ್ಲಿ ರಕ್ತಸಿಕ್ತವಾಗಿ ಶ್ರೀಗಳ ಶವ ಬಿದ್ದಿದ್ದು, ಹೊರಗೆ ವಿಷ ಸೇವಿಸಿದ್ದ ರವಿ ಬಿದ್ದಿದ್ದರು. ತಕ್ಷಣ ದುಶ್ಯಂತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವಿಚಾರ ತಿಳಿದು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಭೇಟಿ ನೀಡಿ ಪರಿಶೀಲಿಸಿದರು. ದುಶ್ಯಂತ್ ನೀಡಿದ ದೂರಿನ ಮೇರೆಗೆ ನಜರ್ ಬಾದ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ನೂ ಮದ್ಯದೊಂದಿಗೆ ವಿಷ ಸೇವಿಸಿರುವ ರವಿ ಅವರನ್ನು ಕೆ.ಆರ್.ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಪ್ರಜ್ಞೆ ಬಂದ ಬಳಿಕ ಶ್ರೀಗಳ ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶ್ರೀಗಳ ಹತ್ಯೆ ಸುತ್ತ ಅನುಮಾನ
ಶ್ರೀಶಿವಾನಂದ ಸ್ವಾಮೀಜಿ ಹತ್ಯೆ ಸುತ್ತ ಪೊಲೀಸರಿಗೆ ಅನುಮಾನ ಹೆಚ್ಚಾಗಿದ್ದು, ಎಲ್ಲಾ ದೃಷ್ಠಿಕೋನಗಳಲ್ಲೂ ತನಿಖೆ ಆರಂಭಿಸಿದ್ದಾರೆ. ಶ್ರೀಗಳ ಹೆಸರಿನಲ್ಲಿ ಸಾಕಷ್ಟು ಆಸ್ತಿಗಳಿದ್ದು, ಆಸ್ತಿ ವಿವಾದದಿಂದ ಕೊಲೆ ಮಾಡಲಾಗಿದೆಯೇ? ಅಥವಾ ಆಪ್ತ ಸಹಾಯಕ ರವಿ ಅವರ ಕೌಟುಂಬಿಕ ಜೀವನದ ಸಮಸ್ಯೆಯ ಬಗ್ಗೆ ಶ್ರೀಗಳು ಬುದ್ಧಿವಾದ ಹೇಳಿದ್ದೇ ಕೊಲೆಗೆ ಕಾರಣವಾಯಿತೆ? ಅಥವಾ ಬೇರೆ ಯಾರೋ ಕೊಲೆ ಮಾಡಿ ರವಿ ಮೇಲೆ ಆರೋಪ ಹೊರಿಸಲಾಗಿದೆಯೇ? ಸೇರಿದಂತೆ ವಿವಿಧ ದೃಷ್ಠಿಕೋನಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೂ ಆತ್ಮಹತ್ಯೆಗೆ ಯತ್ನಿಸಿರುವ ರವಿ ಚೇತರಿಸಿಕೊಂಡು ಹೇಳಿಕೆ ನೀಡಿದ ಬಳಿಕವೇ ಶ್ರೀಗಳ ಹತ್ಯೆಗೆ ನಿಖರವಾಗ ಕಾರಣ ಗೊತ್ತಾಗಲಿದೆ.