ನಟೋರಿಯಸ್ ರೌಡಿಶೀಟರ್ ನನ್ನು ಆತನ ಸಹಚರರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರಿನ ರೌಡಿಶೀಟರ್ ಮಹಮದ್ ಸಾಹಿಲ್ ಆಲಮ್ ಆಲಿಯಾಸ್ ಚುವ್ವಾ (38) ಕೊಲೆಯಾದ ದುರ್ದೈವಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಟೋರಿಯಸ್ ರೌಡಿಶೀಟರ್ ನನ್ನು ಆತನ ಸಹಚರರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೈಸೂರಿನ ರೌಡಿಶೀಟರ್ ಮಹಮದ್ ಸಾಹಿಲ್ ಆಲಮ್ ಆಲಿಯಾಸ್ ಚುವ್ವಾ (38) ಕೊಲೆಯಾದ ದುರ್ದೈವಿ. ಈತ ಕಳೆದ ನಾಲ್ಕೈಂದು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.
ಬೇರೆಡೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಮೈಸೂರು-ಬೆಂಗಳೂರು ಹೆದ್ದಾರಿಯ ಹಳ್ಳಿ ಮನೆ ಹೋಟೆಲ್ ಹಿಂಭಾಗ ಪೊದೆಯಲ್ಲಿ ಮಂಗಳವಾರ ತಡರಾತ್ರಿ ದೇಹ ಎಸೆದು ಹೋಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮೈಸೂರು ಮತ್ತು ಮಂಡ್ಯ ಭಾಗಗಳಲ್ಲಿ ರಾತ್ರಿ ವೇಳೆ ಈತ ಓಡಾಡಿಕೊಂಡಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈತನ ಜೊತೆಗಿದ್ದವರೇ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.ಕೊಲೆಯಾದ ಸಾಹಿಲ್ ಚುವ್ವಾ ಮೈಸೂರಿನ ಉದಯಗಿರಿ, ಎನ್.ಆರ್.ಮೊಹಲ್ಲಾ, ಮಂಡಿ ಮೊಹಲ್ಲಾ ಹಾಗೂ ವಿ.ವಿ.ಪುರಂ ಸೇರಿದಂತೆ ತುಮಕೂರಿನಲ್ಲೂ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಎಸ್ಪಿ ಶೋಭರಾಣಿ, ಅಡಿಷನಲ್ ಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಕೃಷ್ಣಕುಮಾರ್, ಟೌನ್ ಪೊಲಿಸ್ ಠಾಣೆ ಸಿಪಿಐ ಕುಮಾರ್ ಹಾಗೂ ಪಿಎಸ್‌ಐ ಗಳಾದ ವಿವೇಕಾನಂದ್, ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.