ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!

| N/A | Published : Aug 03 2025, 11:45 PM IST / Updated: Aug 04 2025, 09:51 AM IST

ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!
Share this Article
  • FB
  • TW
  • Linkdin
  • Email

ಸಾರಾಂಶ

ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಮಂಡ್ಯ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

 ಮಂಡ್ಯ :  ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಕೆ.ಆರ್‌.ಪೇಟೆ ತಾಲೂಕು ಬ್ಯಾಲದಕೆರೆ ವೃತ್ತದ ಗ್ರಾಮ ಆಡಳಿತಾಧಿಕಾರಿ ಮಧುಕುಮಾರ್‌, ನಾಗಮಂಗಲ ತಾಲೂಕು ಚಾಮಲಾಪುರ ವೃತ್ತದ ಗ್ರಾಮ ಆಡಳಿತಾಧಿಕಾರಿ ಗಣೇಶ್‌, ಮೈಲಾರ ಪಟ್ಟಣ ವೃತ್ತದ ಗ್ರಾಮ ಆಡಳಿತಾಧಿಕಾರಿಗಲಾದ ವಿ.ಪ್ರಿಯಾ, ಕೆ.ಎಸ್‌.ಲೋಹಿತ್‌, ಮುಳುಕಟ್ಟೆ ವೃತ್ತದ ವೈ.ಪ್ರದೀಪ್‌ಕುಮಾರ್‌, ಎ.ನಾಗತಿಹಳ್ಳಿ ವೃತ್ತದ ಅರ್ಚನಾ ರೀನಾ, ಎಲೆಕೊಪ್ಪ ವೃತ್ತದ ಸಿದ್ದಪ್ಪ, ಮದ್ದೂರು ತಾಲೂಕು ಆತಗೂರು ಹೋಬಳಿ ನಾಡಕಚೇರಿಯ ಗ್ರಾಮ ಆಡಳಿತಾಧಿಕಾರಿ ರಘು, ಮಂಡ್ಯ ತಾಲೂಕು ಶಿವಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಡಿ.ಇ.ಅಣ್ಣಪ್ಪ ಅವರು ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳ ಪೈಕಿ 8 ಮಂದಿ 2012ರಲ್ಲಿ ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಡಿ.ಇ.ಅಣ್ಣಪ್ಪ ಎಂಬುವರು 2018ರಲ್ಲಿ ನಕಲಿ ಪ್ರಮಾಣಪತ್ರದೊಂದಿಗೆ ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದಾರೆ ಎಂದು ದೂರಲಾಗಿದೆ.

ಗ್ರಾಮ ಆಡಳಿತಾಧಿಕಾರಿಯಾಗಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಅವರು ರೂಲ್‌ 6ರಂತೆ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಅವರು ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಆಯ್ಕೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಎಲ್ಲಾ ಪ್ರಾಧಿಕಾರಗಳು, ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಘ ಸಂಸ್ಥೆಗಳಲ್ಲಿ ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವುದಕ್ಕೆ ವಿಶೇಷ ತನಿಖಾ ತಂಡವನ್ನು ರಾಜ್ಯಾದ್ಯಂತ ರಚಿಸುವಂತೆ ದೂರಿನಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಎಟಿ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸರ್ಕಾರದ ಪರ ಪ್ರಕರಣಗಳನ್ನು ನಡೆಸಲು ವಿಶೇಷ ವಕೀಲರನ್ನು ನೇಮಿಸುವಂತೆ ಆಗ್ರಹಪಡಿಸಿದ್ದಾರೆ.

ಕಂದಾಯ ಇಲಾಖೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ 2012ರಲ್ಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಆಯ್ಕೆಯಾದ ಎಂಟು ಮಂದಿ ವಿರುದ್ಧದ ಪ್ರಕರಣ ವಿಚಾರಣಾ ಹಂತದಲ್ಲಿದೆ. ಅವರನ್ನು ತಕ್ಷಣದಿಂದಲೇ ಹುದ್ದೆಯಿಂದ ವಜಾಗೊಳಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಅವರು ಇಲ್ಲಿಯವರೆಗೆ ಪಡೆದಿರುವ ಸಂಬಳವನ್ನು ವಸೂಲಿ ಮಾಡುವಂತೆ ಒತ್ತಾಯಸಿದ್ದಾರೆ.

Read more Articles on