ಸಾರಾಂಶ
ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದ ರೈತರ ಕಬ್ಬಿನ ಗದ್ದೆಗಳು ಸುಟ್ಟು ನಾಶವಾಗಿವೆ. ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು ಹತ್ತು ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ.
ಮಳವಳ್ಳಿ : ತಾಲೂಕಿನ ತಳಗವಾದಿ ಗ್ರಾಮದ ಹೊರವಲಯದ 10 ಮೈಲಿ ಕಲ್ಲಿನ ಬಳಿ 10 ಎಕರೆ ಪ್ರದೇಶದ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಗ್ರಾಮದ ರೈತರಾದ ಕಾಳೇಗೌಡ, ಚಿಕ್ಕಲಿಂಗಯ್ಯ, ಜಯರಾಮು, ಕೆಂಪೇಗೌಡ, ಚೌಡಯ್ಯ, ಚಂದ್ರಮ್ಮ, ದೇವಿಪುರದ ಮಲ್ಲೇಶ್ ಹಾಗೂ ಮದ್ದೂರು ತಾಲೂಕಿನ ಕರಡಕೆರೆ ಗ್ರಾಮಗಳ ರೈತರು ಸೇರಿದಂತೆ ಹಲವರ ಕಬ್ಬಿನ ಗದ್ದೆಗಳು ಸುಟ್ಟು ನಾಶವಾಗಿವೆ. ಭಾನುವಾರ ಸಂಜೆ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು ಹತ್ತು ಎಕರೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ.
ಸ್ಥಳೀಯರು ಬೆಂಕಿ ಕಂಡು ನಂದಿಸುವ ಪ್ರಯತ್ನ ನಡೆಸಿದರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಕಬ್ಬು ಸುಟ್ಟು ಕರಕಲಾಗಿದೆ. ಭೀಕರ ಬರಗಾಲದ ನಡುವೆಯೂ ಕೂಳವೆಬಾವಿ ನೀರಿನಿಂದ ಕಬ್ಬು ಬೆಳೆದ್ದರು. ಬೆಂಕಿ ಬಿದ್ದ ಪರಿಣಾಮ 6 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಹಾಗಾಗಿ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತರಾದ ಕಾಳೇಗೌಡ, ಚಿಕ್ಕಲಿಂಗಯ್ಯ, ಜಯರಾಮು, ಕೆಂಪೇಗೌಡ, ಚೌಡಯ್ಯ ಒತ್ತಾಯಿಸಿದರು.
ಆಕಸ್ಮಿಕ ಬೆಂಕಿ: ಚಂದ್ರಿಕೆ ಭಸ್ಮ, ಮನೆಗೆ ಹಾನಿ
ಭಾರತೀನಗರ: ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಲಕ್ಷಾಂತರು ಮೌಲ್ಯದ ರೇಷ್ಮೆಗೂಡು ಬೆಳೆಯುವ 100ಕ್ಕೂ ಹೆಚ್ಚು ಚಂದ್ರಿಕೆಗಳು ಸುಟ್ಟು ಭಸ್ಮವಾಗಿರುವ ಘಟನೆ ಮೆಣಸಗೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎಂ.ಸಿ.ಲಿಂಗರಾಜು ಬಿನ್ ಚಿಕ್ಕಮೊಗೇಗೌಡ (ಗ್ಯಾಸ್ ಲಿಂಗರಾಜು) ಮನೆಗೆ ಸೋಮವಾರ ಮಧ್ಯಾಹ್ನ 3 ಗಂಟೆ ಆಕಸ್ಮಕವಾಗಿ ಬೆಂಕಿ ತಗುಲಿದೆ. ಮನೆ ಹೊರಾಂಗಣದಲ್ಲಿ ಇಡಲಾಗಿದ್ದ ರೇಷ್ಮೆ ಗೂಡು ಬೆಳೆಯುವ ಚಂದ್ರಿಕೆಗೆ ಮೊದಲು ಬೆಂಕಿ ತಗುಲಿದೆ. ಬೆಂಕಿ ಕೆನ್ನಾಲಿಗೆ ಸಮೀಪದಲ್ಲೇ ಇದ್ದ ಮನೆಗೂ ತಗುಲಿದೆ. ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದೆ.ವಾರಸುದಾರ ಲಿಂಗರಾಜು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಅವಘಡ ನಡೆದಿದೆ. ಬೆಂಕಿ ಜ್ವಾಲೆಯು ವ್ಯಾಪಿಸುತ್ತಿದ್ದಂತೆ ಲಿಂಗರಾಜು ಅವರ ಪತ್ನಿ ಮೂರ್ಚೆ ಹೋಗಿದ್ದು, ಸ್ಥಳೀಯರು ಆಕೆಯನ್ನು ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅಗ್ನಿ ಶಾಮಕ ದಳಕ್ಕೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಿಮಿಸಿ ಅಗ್ನಿ ಶಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಆ ವೇಳೆಗಾಗಲೇ ಮನೆ ಕಿಟಕಿ ಬಾಗಿಲು, ಚಂದ್ರಿಕೆ ನಿಲ್ಲಿಸಲು ನಿರ್ಮಿಸಲಾಗಿದ್ದ ಮೇಲ್ಚಾವಣಿಗಳು ಸುಟ್ಟು ಕರಕಲಾಗಿವೆ.